ಸೋಮವಾರಪೇಟೆ,ಅ.29: ಕಳೆದ ಹಲವು ಸಮಯಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ನಿರಂತರವಾಗಿ ಮೊಬೈಲ್ ಹಾಗೂ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಮೊಬೈಲ್, ಬೈಕ್ ಕಳ್ಳರನ್ನು ಸಂಘಟಿತ ಕಾರ್ಯಾಚರಣೆಯ ಮೂಲಕ ಬಲೆಗೆ ಕೆಡವಿದ್ದು, ಒಟ್ಟು ನಾಲ್ವರು ಕಳ್ಳರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಬಂದಿತರಿಂದ ಆರು ಮೊಬೈಲ್ ಫೋನ್‍ಗಳೂ ಸೇರಿದಂತೆ 2 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಟ್ಟಣದ ರೇಂಜರ್‍ಬ್ಲಾಕ್ ನಿವಾಸಿ ಸಿದ್ದೇಗೌಡ ಅವರ ಪುತ್ರ ಪುನೀತ್(20), ಅದೇ ಬ್ಲಾಕ್‍ನ ಸುಬ್ರಮಣಿ ಅವರ ಪುತ್ರ ಯಶವಂತ್ (22), ವೆಂಕಟೇಶ್ವರ ಬ್ಲಾಕ್‍ನ ಕೇಶವ ಅವರ ಮಗ ಕೆ.ಕೆ. ಮಂಜುನಾಥ್ (35) ಹಾಗೂ ಮಹದೇಶ್ವರ ಬಡಾವಣೆಯ ರೆಹಮಾನ್ ಅವರ ಪುತ್ರ ರಿಯಾಜ್ (28) ಎಂಬವರುಗಳೇ ಬಂದಿತರು.

ಕಳೆದ ತಾ. 20.10.2019ರಂದು ರೇಂಜರ್ಸ್‍ಬ್ಲಾಕ್‍ನ ಡ್ಯಾನಿಯಲ್ ಡಿಸೋಜ ಅವರು ತಮ್ಮ ಡಿಸ್ಕವರ್ ಬೈಕ್‍ನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದು, ಮಾರನೇ ದಿನ ಬೈಕ್ ಕಳುವಾಗಿತ್ತು. ಅಂತೆಯೆ ತಾ. 14.10.2019ರಂದು ಇಲ್ಲಿನ ಜೇನು ಸೊಸೈಟಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಿರಗಂದೂರು ಗ್ರಾಮ ನಿವಾಸಿ

(ಮೊದಲ ಪುಟದಿಂದ) ಮಧುಸೂದನ್ ಅವರ ಟಿವಿಎಸ್ ವಿಕ್ಟರ್ ಬೈಕ್ ಸಹ ನಾಪತ್ತೆಯಾಗಿತ್ತು. ಇದರೊಂದಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವಷ್ಟು ಮಂದಿಯ ಮೊಬೈಲ್‍ಗಳು ಕಳುವಾಗಿದ್ದವು. ಈ ಬಗ್ಗೆ ದೂರು ದಾಖಲಿಸಿಕೊಂಡ ಸೋಮವಾರಪೇಟೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ನಿನ್ನೆ ಬೆಳಿಗ್ಗೆ ಆರೋಪಿ ರಿಯಾಜ್, ಇಲ್ಲಿನ ಆಸ್ಪತ್ರೆ ಆವರಣದಲ್ಲಿ ತಾನು ಕಳವು ಮಾಡಿದ್ದ ಮೊಬೈಲ್‍ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ರಿಯಾಜ್, ತನ್ನ ಬಳಿಯಿದ್ದ ಮೊಬೈಲ್‍ಗಳ ಮಾಹಿತಿ, ಬಿಲ್‍ಗಳನ್ನು ನೀಡಲು ವಿಫಲನಾಗಿದ್ದು, ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ ಸಂದರ್ಭ ಸರಣಿ ಕಳ್ಳತನ ಪ್ರಕರಣಗಳು ತೆರೆದುಕೊಂಡಿವೆ.

ಈತನೊಂದಿಗೆ ಇತರ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಡ್ಯಾನಿಯಲ್ ಡಿಸೋಜ ಅವರಿಗೆ ಸೇರಿದ ಬೈಕ್‍ನ್ನು ಲೋಡರ್ಸ್ ಕಾಲೋನಿಯಲ್ಲಿರುವ ಆರೋಪಿ ಪುನೀತ್‍ನ ದೊಡ್ಡಪ್ಪನ ಮನೆಯಿಂದ ವಶಕ್ಕೆ ಪಡೆದಿದ್ದಾರೆ.

ಮಧುಸೂದನ್ ಅವರ ವಿಕ್ಟರ್ ಬೈಕ್‍ನ್ನು ಮಾರಾಟ ಮಾಡಲು ವಿಫಲರಾಗಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದು, ಇದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಂದಿತ ಆರೋಪಿಗಳಿಂದ ಎರಡು ಬೈಕ್ ಸೇರಿದಂತೆ ಸ್ಯಾಮ್‍ಸಂಗ್ ಹಾಗೂ ಜಿಯೋ ಕಂಪೆನಿಯ ತಲಾ 2 ಮೊಬೈಲ್, ಎಂ.ಐ., ಲೆನೆವೋ ಕಂಪೆನಿಯ ತಲಾ 1 ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಮದ್ಯಪಾನಿಗಳೇ ಟಾರ್ಗೆಟ್: ಮದ್ಯಪಾನ ಮಾಡಿ ರಸ್ತೆಯಲ್ಲಿ ಒಂಟಿಯಾಗಿ ನಡೆಯುವವರೇ ಈ ಕಳ್ಳರ ಟಾರ್ಗೆಟ್ ಆಗಿರುವದು ವಿಚಾರಣೆಯಿಂದ ತಿಳಿದುಬಂದಿದೆ. ಇದರೊಂದಿಗೆ ಸಂತೆಯ ಹಿಂದಿನ ದಿನ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಮಲಗುವ ಮಂದಿಯಿಂದಲೂ ನಿರಂತರವಾಗಿ ಮೊಬೈಲ್‍ಗಳನ್ನು ಕಳವು ಮಾಡಿದ್ದಾರೆ. ಕಳೆದ 1 ವರ್ಷದಿಂದ ಇಂತಹ ಕಳ್ಳತನವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವದು ಪೊಲೀಸ್ ವಿಚಾರಣೆ ಸಂದರ್ಭ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದ್ದು, ಹಲವಷ್ಟು ಮಂದಿ ಈ ಬಗ್ಗೆ ಪೊಲೀಸರಿಗೇ ದೂರನ್ನೇ ನೀಡಿಲ್ಲ. ಡಿವೈಎಸ್‍ಪಿ ಮುರುಳೀಧರ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಪ್ರೊಬೇಷನರಿ ಎಸ್.ಐ. ಮಂಜುನಾಥ್, ಸಿಬ್ಬಂದಿಗಳಾದ ಮಧು, ಸಂದೇಶ್, ಪ್ರವೀಣ್, ಸಜಿ, ದಯಾನಂದ್, ಗಿರೀಶ್ ಹಾಗೂ ರಾಜೇಶ್ ಅವರುಗಳು ಭಾಗವಹಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.