ವರದಿ-ಚಂದ್ರಮೋಹನ್ ಕುಶಾಲನಗರ, ಅ. 29 : ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕಾವೇರಿ ನದಿ ತಟಗಳ ಒತ್ತಿನಲ್ಲಿ ನಿಯಮಬಾಹಿರವಾಗಿ ಕೆಲವು ಅಪಾಯಕಾರಿ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು ಈ ಮೂಲಕ ನದಿಯ ನೀರಿಗೆ ವಿಷಕಾರಿ ರಾಸಾಯನಿಕಗಳು ಸೇರ್ಪಡೆಗೊಳ್ಳುವದರೊಂದಿಗೆ ಸಂಪೂರ್ಣ ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕುಶಾಲನಗರದ ಸಮೀಪ ಶಿರಂಗಾಲ, ಹೆಬ್ಬಾಲೆ ಮತ್ತು ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ನದಿ ತಟಗಳಲ್ಲಿ ಶುಂಠಿ ತೊಳೆಯುವ ಘಟಕಗಳು ಅಕ್ರಮವಾಗಿ ನಿರ್ಮಾಣಗೊಂಡಿದ್ದು ಶುಂಠಿ ಸ್ವಚ್ಛಗೊಳಿಸುವ ಹೆಸರಿನಲ್ಲಿ ರಾಸಾಯನಿಕ ಪದಾರ್ಥಗಳನ್ನು ನೇರವಾಗಿ ನದಿಗೆ ಹರಿಸುತ್ತಿರುವದು ನಿರಂತರವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಮಾತ್ರ ಕಣ್ಮುಚ್ಚಿ ಕುಳಿತಿದೆ.
ಕಾವೇರಿ ನದಿಗೆ ದಿನನಿತ್ಯ ಲಕ್ಷಾಂತರ ಲೀಟರ್ ಪ್ರಮಾಣದ ವಿಷಕಾರಿ ಅಂಶವನ್ನು ಹರಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿದೆ. ದಿನನಿತ್ಯ ಲೋಡ್‍ಗಟ್ಟಲೆ ಶುಂಠಿ ತೊಳೆಯುವ ಘಟಕಗಳಿಗೆ
(ಮೊದಲ ಪುಟದಿಂದ) ರವಾನೆಯಾಗುತ್ತಿದ್ದು ಇದರಿಂದ ಹೊರಸೂಸುವ ರಾಸಾಯನಿಕ ಮಿಶ್ರಿತ ಅಂಶಗಳು ನದಿ ಪಾಲಾಗುತ್ತಿವೆ. ಈ ಅಕ್ರಮ ಘಟಕಗಳಿಂದ ನಿತ್ಯ ಅಂದಾಜು 50 ಲಕ್ಷ ಲೀ. ಪ್ರಮಾಣದ ನೀರು ಹೊರಸೂಸುತ್ತಿದ್ದು ನೇರವಾಗಿ ನದಿ ಒಡಲು ಸೇರುತ್ತಿದೆ. ಇಂತಹ ಘಟಕಗಳನ್ನು ಪ್ರತ್ಯೇಕವಾಗಿ ಕೈಗಾರಿಕಾ ಬಡಾವಣೆಗಳಲ್ಲಿ ಮಾತ್ರ ನಿರ್ಮಾಣ ಮಾಡಲು ಅವಕಾಶವಿದ್ದರೂ, ಕುಶಾಲನಗರ ಸುತ್ತಮುತ್ತ ಮಾತ್ರ ನದಿ ತಟಗಳಲ್ಲಿಯೇ ನಿರ್ಮಿಸಲು ಸ್ಥಳೀಯ ಆಡಳಿತ ಅಕ್ರಮವಾಗಿ ಅನುಮತಿ ನೀಡಿರುವದು ಸಂಶಯಕ್ಕೆ ಎಡೆಮಾಡಿದೆ. ಈ ಘಟಕಗಳನ್ನು ತಕ್ಷಣ ತೆರವುಗೊಳಿಸಲು ಮೈಸೂರಿನಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೂಚನೆ ನೀಡಿದರೂ ಗ್ರಾ.ಪಂ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವದು ಎದ್ದು ಕಾಣುತ್ತಿದೆ.
ಶುಂಠಿ ಬೆಳೆಯುವ ಸಂದರ್ಭ ತಗಲುವ ರೋಗಬಾಧೆ ತಪ್ಪಿಸಲು ಕೀಟನಾಶಕಗಳನ್ನು ಸಿಂಪಡಿಸುತ್ತಿರುವದು ಸಾಮಾನ್ಯ. ಅಪಾಯಕಾರಿ ರಾಸಾಯನಿಕ ಮಿಶ್ರಿತ ಕೀಟನಾಶಕಗಳನ್ನು ಕೆಲವೆಡೆ ಬಳಸಲಾಗುತ್ತಿದ್ದು, ಶುಂಠಿಯನ್ನು ತೊಳೆಯುವ ಸಂದರ್ಭ ಈ ಅಂಶ ನೀರಿನೊಂದಿಗೆ ಮಿಶ್ರಿತವಾಗಿ ಹರಿಯುತ್ತದೆ. ಶುಂಠಿ ತೊಳೆಯುವ ಕಾರ್ಖಾನೆ ವ್ಯಾಪ್ತಿಯಲ್ಲಿ ಯಾವದೇ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣವಾಗದಿದ್ದರೂ ಸ್ಥಳೀಯ ಆಡಳಿತ ಮಾತ್ರ ನಿಯಮ ಬಾಹಿರವಾಗಿ ಇಂತಹ ಘಟಕಗಳಿಗೆ ಅನುಮತಿ ನೀಡುತ್ತಿರುವದೇ ಆತಂಕಕಾರಿ ಬೆಳವಣಿಗೆ ಸೃಷ್ಟಿಯಾಗಲು ಕಾರಣವಾಗಿದೆ.
ಇಂತಹ ಅನಾಹುತಕಾರಿ ಘಟಕಗಳನ್ನು ತಕ್ಷಣ ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗಳು ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್ ಆಗ್ರಹಿಸಿದ್ದಾರೆ. ವಿಷಕಾರಿ ಅಂಶಗಳು ನದಿ ಒಡಲು ಸೇರುವ ಮೂಲಕ ನದಿ ನೀರಿನ ಗುಣಮಟ್ಟ ಏರುಪೇರಾಗುವದರೊಂದಿಗೆ ನೀರನ್ನು ನೇರವಾಗಿ ಬಳಸುವ ಮೂಲಕ ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಉಂಟಾಗುವ ಸಂಭವ ಇರುವುದರಿಂದ ತಕ್ಷಣ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ನಡುವೆ ಕಾವೇರಿ ನದಿ ಸೇರಿದಂತೆ ಇತರ ನದಿಗಳ ನೀರು ಕುಡಿಯಲು ಯೋಗ್ಯವಿಲ್ಲದಿರುವದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ಬಂದಿದ್ದು ಕೊಡಗು ಜಿಲ್ಲೆಯಲ್ಲಿ ಕಾವೇರಿಯ ಮೂಲದಲ್ಲಿಯೇ ನೀರಿನ ಗುಣಮಟ್ಟ ಬಿ, ಸಿ ದರ್ಜೆಗೆ ಇಳಿದಿರುವ ಬಗ್ಗೆ ವರದಿಗಳು ಹೊರಬಿದ್ದಿವೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ವ್ಯಾಪ್ತಿಯ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ದಾವೆ ಹೂಡಿಸಿರುವದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯದ ಹಿರಿಯ ಪರಿಸರ ಅಧಿಕಾರಿ ಜಿ.ಎ.ಉದಯಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.
ನೇರವಾಗಿ ನದಿಗೆ ರಾಸಾಯನಿಕಗಳನ್ನು ಹರಿಸುವದು, ಶೌಚಾಲಯ ತ್ಯಾಜ್ಯಗಳನ್ನು ಬಿಡುವದು ಅಪರಾಧವಾಗಿದ್ದು, ಇಂತಹ ಘಟಕ ಮತ್ತು ವಾಣಿಜ್ಯ ಕೇಂದ್ರಗಳಿಗೆ ಅನುಮತಿ ನೀಡಬಾರದು. ಯಾವದೇ ಮಲಿನ ನೀರನ್ನು ನೇರವಾಗಿ ನದಿಗೆ ಬಿಡದೆ ಎಸ್‍ಟಿಪಿ ಪ್ಲಾಂಟ್ ಮೂಲಕ ಶುದ್ಧೀಕರಿಸಿ ವಿಲೇವಾರಿ ಮಾಡಬೇಕಿದೆ ಎಂದಿದ್ದಾರೆ.