ಮಡಿಕೇರಿ. ಅ. 28: ವೀರಾಜಪೇಟೆಯಲ್ಲಿ ರಾಜ್ಯ ಹೆದ್ದಾರಿ ಯೋಜನೆಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕಾಮಗಾರಿಗಾಗಿ ಎರಡು ಇಲಾಖೆಗಳು ಪೂರ್ವ ಸಿದ್ಧತೆ ನಡೆಸಿದ್ದು ಇಲ್ಲಿನ ಪಟ್ಟಣ ಪಂಚಾಯಿತಿ ಮೊದಲ ಹಂತವಾಗಿ ಕಟ್ಟಡಗಳನ್ನು ಕೆಡವಲು ರಸ್ತೆಯ ಮಧ್ಯ ಭಾಗದಿಂದ ಅಳತೆ ಮಾಡಿ ಗುರುತು ಮಾಡಿದೆ. ಈಗಾಗಲೇ ಮಲಬಾರ್ ರಸ್ತೆಯ ಪೆಟ್ರೋಲ್ ಬಂಕ್‍ನಿಂದ ಗಡಿಯಾರ ಕಂಬದವರೆಗೆ ರಸ್ತೆಯ ಮಧ್ಯ ಭಾಗದಿಂದ 30 ರಿಂದ 33 ಅಡಿಗಳ ವರೆಗಿನ ಅಂತರದಲ್ಲಿ ಗುರುತು ಮಾಡಲಾಗಿದೆ.ರಸ್ತೆ ಅಗಲೀಕರಣದಲ್ಲಿ ಇಲ್ಲಿನ ಎರಡು ಬಣಗಳ ನಡುವೆ ಪೈಪೋಟಿ ನಡೆಯುತ್ತಿದ್ದು ಇಲ್ಲಿನ ಸಿದ್ದಾಪುರ ರಸ್ತೆ, ತೆಲುಗರಬೀದಿಯ ನಿವಾಸಿಗಳ ಬಣ ರಸ್ತೆ ಅಗಲೀಕರಣದಿಂದ ಪಟ್ಟಣದ ಅಸ್ತಿತ್ವಕ್ಕೆ ಧಕ್ಕೆಯಾಗಲಿದ್ದು ಇದನ್ನು ಕೈ ಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ರಸ್ತೆ ಅಗಲೀಕರಣದ ಪರವಾಗಿ ಹೋರಾಡುತ್ತಿರುವ ಬಣವೂ ವೀರಾಜಪೇಟೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣವಾಗ ಬೇಕೆಂದು ಪಣತೊಟ್ಟು ಹೋರಾಟ ನಡೆಸುತ್ತಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಪ್ರಕಾರ ರಸ್ತೆಯ ಮಧ್ಯ ಭಾಗದಿಂದ ಏಳು ಮೀಟರ್ ಹಾಗೂ ಚರಂಡಿ ಫುಟ್‍ಪಾತ್‍ಗೆ ಅಗತ್ಯವಿರು ವಷ್ಟು ಜಾಗವನ್ನು ಬಳಸಿಕೊಂಡು ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ನಿಗಮ ಇ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಿದೆ. ಈಗಾಗಲೇ ಸರಕಾರ ರಸ್ತೆ ಅಗಲೀಕರಣಕ್ಕೆ ರೂ 16.5ಕೋಟಿ ವೆಚ್ಚ ನಿಗಧಿಪಡಿಸಿದೆ. ಈ ಹಿಂದಿನ ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯ ಯೋಜನೆಯನ್ನು ಆಧರಿಸಿ ಅಮ್ಮತ್ತಿ ಪಟ್ಟಣದಿಂದ ವೀರಾಜಪೇಟೆಯ ಆರ್ಜಿ ಗ್ರಾಮದ ಸೇತುವೆಯವರೆಗೆ ರಸ್ತೆ ಅಗಲೀಕರಣಕ್ಕೆ ನಿಗಮ ಯೋಜನೆಯನ್ನು ರೂಪಿಸಿದೆ.

ಕಳೆದ 2017ರಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸುಪ್ರೀಂ ಕೋರ್ಟ್ ಮದ್ಯ ಮಾರಾಟವನ್ನು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸುಮಾರು 1500ಕ್ಕೂ ಅಧಿಕ ಮದ್ಯದ ಅಂಗಡಿಗಳು ಸೇರಿದಂತೆ ಬಾರ್‍ಗಳಿಗೆ ಮರುಜೀವ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದ ಕೆಲವು ಹೆದ್ದಾರಿಗಳನ್ನು ಡೀನೋಟಿಫೈ ಮೂಲಕ ಬದಲಾವಣೆ ಮಾಡಿತ್ತು. ಅದರಂತೆ ವೀರಾಜಪೇಟೆ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿರುವದರಿಂದ ಸುಮಾರು ಒಂಭತ್ತು ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚಬೇಕಾಗಿರುವ ದರಿಂದ ಜೂನ್ ತಿಂಗಳಲ್ಲಿ ರಾಜ್ಯ ಸರಕಾರವು ಮಗ್ಗುಲ ಗ್ರಾಮದ ತಿರುವಿನಿಂದ ಆರ್ಜಿ ಸೇತುವೆ ಯವರೆಗಿನ ರಾಜ್ಯ ಹೆದ್ದಾರಿಯನ್ನು ಪಟ್ಟಣ ಪಂಚಾಯಿತಿ ರಸ್ತೆಯಾಗಿ ಪರಿವರ್ತನೆ ಮಾಡಿತ್ತು. ಇದರಿಂದಾಗಿ ಈ ರಸ್ತೆಯ ಉಸ್ತುವಾರಿ ನಿರ್ವಹಣೆ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ್ದಾಗಿದೆ. ಈಗ ಹೆದ್ದಾರಿ ಅಭಿವೃದ್ಧಿ ನಿಗಮ ರಸ್ತೆ ಅಗಲೀಕರಣಕ್ಕೆ ಮುಂದಾ ಗಿರುವದರಿಂದ ಈ ರಸ್ತೆ ಪಟ್ಟಣ ಪಂಚಾಯಿತಿಗೆ ಸೇರಿದೋ ಇಲ್ಲವೇ ಹೆದ್ದಾರಿ ನಿಗಮಕ್ಕೆ ಸೇರಿದ್ದೋ ಎಂಬ ಗೊಂದಲ ಮೂಡಿದೆ.

(ಮೊದಲ ಪುಟದಿಂದ) ಎರಡು ಇಲಾಖೆಗಳು ಈ ರಸ್ತೆ ಯಾರದೆಂಬದನ್ನು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿಲ್ಲ. ಈಗ ವೀರಾಜಪೇಟೆಯಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರದ ದಟ್ಟಣೆ ಜಾಸ್ತಿಯಾಗುತ್ತಿದ್ದು ಸಿದ್ದಾಪುರ ರಸ್ತೆ, ತೆಲುಗರಬೀದಿ, ಜೈನರಬೀದಿ ನಿವಾಸಿಗಳ ಪ್ರಕಾರ ರಸ್ತೆ ಅಗಲೀಕರಣದಿಂದ ವಾಹನ ಸಂಚಾರ ಸಮಸ್ಯೆ ನೀಗುವದಿಲ್ಲ. ಇದರ ಬದಲು ಮುಖ್ಯರಸ್ತೆಯಲ್ಲಿರುವ ಎಲ್ಲ ಕಾರು ಪಾರ್ಕಿಂಗ್‍ಗಳನ್ನು ಆಯ್ದ ಕಡೆಗಳಿಗೆ ಸ್ಥಳಾಂತರಿಸಿದರೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ಸಿದ್ದಾಪುರ ರಸ್ತೆಯಿಂದ ಆರ್ಜಿ ಗ್ರಾಮದವರೆಗಿನ ಕಟ್ಟಡ ಕೆಡವಿದರೂ ಕಟ್ಟಡ ಮನೆ ಮಠ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ರಸ್ತೆ ಅಗಲೀಕರಣದಿಂದ ನಷ್ಟಕ್ಕೊಳಗಾಗುವ ಕಟ್ಟಡ ಮಾಲೀಕರ ಬೇಡಿಕೆಯಾಗಿದೆ.

ಈಗ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಕೈಗೊಂಡಿರುವ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಪಟ್ಟಣ ಪಂಚಾಯಿತಿ ನಿರ್ದೇಶನದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪಟ್ಟಣ ಪಂಚಾಯಿತಿ ರಸ್ತೆ ಅಗಲೀಕರಣದಿಂದ ಉಂಟಾಗುವ ನಷ್ಟದ ಕುರಿತು ಅಂದಾಜು ಸಮೀಕ್ಷೆ ನಡೆಸಿ ವರದಿ ತಯಾರಿಸಿದೆ.

ವೀರಾಜಪೇಟೆಯಲ್ಲಿ ರಸ್ತೆ ಅಗಲೀಕರಣದ ಸಂಬಂಧದಲ್ಲಿ ಕಳೆದ ಆ. 2ರಂದು ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರ ಸಮಿತಿ ಸಭೆ ಕರೆಯಲಾಗಿತ್ತು. ಸದಸ್ಯರುಗಳು ಯಾವದೇ ಒಮ್ಮತಕ್ಕೆ ಬಾರದಿದ್ದುರಿಂದ ಸಭೆಯನ್ನು ಮುಂದೂಡಲಾಗಿತ್ತು. ಇದೇ ಅಗಲೀಕರಣದ ಸಂಬಂಧದಲ್ಲಿ ಸೆ. 25 ರಂದು ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಅಧಿಕಾರಿಗಳು ಹಾಗೂ ಶಾಸಕರ ಸಮ್ಮುಖದಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಸಾರ್ವಜನಿಕ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ರಸ್ತೆ ಮಧ್ಯ ಭಾಗದಿಂದ 30 ಅಡಿಗಳ ಅಂತರದವರೆಗೆ ರಸ್ತೆ ಅಗಲೀಕರಣ ಗೊಳಿಸಲು ಸಭೆ ತೀರ್ಮಾನಿಸ ಲಾಗಿತ್ತು. ಇದನ್ನು ಕೆಲವರು ಒಪ್ಪದೆ ಸಭೆಗೆ ಹಾಜರಾಗಿ ಸಹಿ ಮಾಡಿದ್ದೇವೆ ಸಭೆಯ ಯಾವ ತೀರ್ಮಾನವನ್ನು ಒಪ್ಪಿಲ್ಲ. ಸಭೆಯಿಂದ ಹೊರಬಂದ ಮೇಲೆ ರಸ್ತೆ ಅಗಲೀಕರಣವನ್ನು ವಿರೋಧಿಸಿ ದರೆಂದು ರಸ್ತೆ ಅಗಲೀಕರಣದ ಪರವಾದ ಬಣ ದೂರಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ವರ್ತಕರು ಪಟ್ಟಣಕ್ಕೆ ತಕ್ಕಂತೆ ಮಿತಿಗೊಳಪಟ್ಟು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಪರೋಕ್ಷವಾಗಿ ಬೆಂಬಲ ನೀಡಿರುವದಾಗಿ ಹೇಳಲಾಗಿದೆ. ವೀರಾಜಪೇಟೆಯಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇನ್ನು ವಾದ ವಿವಾದಗಳು ಮುಂದುವರೆದಿದ್ದು ಇದು ಯಾವ ಹಂತಕ್ಕೆ ತಲಪಬಹುದೆಂದು ಕಾದು ನೋಡಬೇಕಾಗಿದೆ.