ಸುಂಟಿಕೊಪ್ಪ, ಅ. 30: ಇಲ್ಲಿನ ನಾಡ ಕಚೇರಿಯಲ್ಲಿ ಹಲವಾರು ತಿಂಗಳುಗಳಿಂದ ಗ್ರಾಮ ಲೆಕ್ಕಿಗರ ಕೊರತೆಯಿದ್ದು, ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.
ಸುಂಟಿಕೊಪ್ಪ ಸೇರಿದಂತೆ ನಾಕೂರು-ಶಿರಂಗಾಲ, 7ನೇ ಹೊಸಕೋಟೆ, ಕಂಬಿಬಾಣೆÉ ಕೊಡಗರಹಳ್ಳಿ ಕೆದಕಲ್, ಹಾಲೇರಿ, ಶಿರಂಗಳ್ಳಿ, ಮಾದಾಪುರ, ಹಾಡಗೇರಿ, ಹಟ್ಟಿಹೊಳೆ, ಗರ್ವಾಲೆ, ಸೂರ್ಲಬ್ಬಿ ಸೇರಿದಂತೆ ಸುಮಾರು 39 ಗ್ರಾಮಗಳು ಇಲ್ಲಿನ ನಾಡ ಕಚೇರಿಗೆ ಒಳಪಡುತ್ತದೆ.
ಪ್ರತಿನಿತ್ಯ ಈ ಗ್ರಾಮಗಳ ನೂರಾರು ಜನ ತಮ್ಮ ಕೆಲಸದ ನಿಮಿತ್ತ ನಾಡ ಕಚೇರಿಗೆ ಬರುತ್ತಾರೆ. ಆದರೆ 9 ಗ್ರಾಮ ಲೆಕ್ಕಿಗರು ಕಾರ್ಯ ನಿರ್ವಹಿಸುವಲ್ಲಿ ಕೇವಲ 6 ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಅದರಲ್ಲಿ ಇದೀಗ 3 ಗ್ರಾಮ ಲೆಕ್ಕಿಗರು ಬಡ್ತಿ ಹೊಂದಿ ಬೇರೆಡೆಗೆ ವರ್ಗಾವಣೆಗೊಂಡ ಪರಿಣಾಮ ಕೇವಲ 3 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಯಾವದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿ¯್ಲ. ತಮ್ಮ ದಿನನಿತ್ಯದ ಕೂಲಿ ಸೇರಿದಂತೆ ಇನ್ನಿತರ ಕೆಲಸಗಳನ್ನು ಬಿಟ್ಟು ಕಚೇರಿಗೆ ಬಂದಾಗ ಸಿಬ್ಬಂದಿ ಇಲ್ಲದಿರುವದರಿಂದ ಪೆಚ್ಚು ಮೋರೆ ಹಾಕಿಕೊಂಡು ಹಿಂತಿರುಗುತ್ತಿರುವದು ಕಂಡು ಬಂದಿದೆ.
ಇದರಿಂದಾಗಿ ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಬಂದ ಕೂಲಿ ಕಾರ್ಮಿಕರು, ರೈತರು, ಸಾರ್ವಜನಿಕರು ಕಚೇರಿ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅದರಲ್ಲೂ ಕೊಡಗಿಗೆ ಸಚಿವರು, ಮಂತ್ರಿಗಳು ಅಥವಾ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರು ಸೇರಿದಂತೆ ಗ್ರಾಮಲೆಕ್ಕಿಗರು ಆ ಸ್ಥಳದಲ್ಲಿರಬೇಕಾದ ಅನಿವಾರ್ಯತೆ ಇರುವದರಿಂದ ಆ ವೇಳೆ ನಾಡಕಚೇರಿಯಲ್ಲಿ ಯಾವದೇ ತುರ್ತು ಕೆಲಸಗಳು ನಡೆಯದೆ ಇರುವದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಇಲ್ಲಿನ ನಾಡ ಕಚೇರಿಗೆ ಗ್ರಾಮ ಲೆಕ್ಕಿಗರನ್ನು ನೇಮಕಗೊಳಿಸಲು ಜಿಲ್ಲಾಧಿಕಾರಿಗಳು, ಶಾಸಕರು, ಇತರ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಸೋಮಯ್ಯ, ಸಂಜೀವ, ತಿಮ್ಮಪ್ಪ, ರಮೇಶ, ಮೊಹಿದ್ದೀನ್, ಮುಸ್ತಾಫ ಇತರರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.