ಗೋಣಿಕೊಪ್ಪ ವರದಿ, ಅ. 29 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪುರುಷರ ಬಿ. ಡಿವಿಜನ್ ಹಾಕಿ ಲೀಗ್‍ನ ಮಂಗಳವಾರ ಪಂದ್ಯಗಳಲ್ಲಿ ಎಸ್‍ಆರ್‍ಸಿ ಕಾಕೋಟುಪರಂಬು ಮತ್ತು ಕಾಲ್ಸ್ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು. ಉಳಿದಂತೆ ಬೊಟ್ಯತ್ನಾಡ್, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ವೀರಾಜಪೇಟೆ ಎಫ್‍ಎಂಸಿ, ಡಾಲ್ಪಿನ್ಸ್ ತಂಡಗಳು ಜಯ ಸಾಧನೆ ಮಾಡಿದವು.

ಎಸ್‍ಆರ್‍ಸಿ ಕಾಕೋಟುಪರಂಬು ಮತ್ತು ಕಾಲ್ಸ್ ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಡ್ರಾ ಫಲಿತಾಂಶ ಕಂಡಿತು. ಆ ಮೂಲಕ ಕಾಲ್ಸ್ ತಂಡವು ತನ್ನ ಸೋಲಿಲ್ಲದ ಫಲಿತಾಂಶ ಮುಂದುವರಿಸಿದೆ. ಬೊಟ್ಯತ್ನಾಡ್ ತಂಡವು ಮೂರ್ನಾಡ್ ಜನರಲ್ ತಿಮ್ಮಯ್ಯ ತಂಡವನ್ನು 3-0 ಗೋಲುಗಳಿಂದ ಮಣಿಸಿ ಗೆಲವಿನ ನಾಗಲೋಟ ಮುಂದುವರಿಸಿತು. ಬೊಟ್ಯತ್ನಾಡ್ ಪರ 10 ನೇ ನಿಮಿಷದಲ್ಲಿ ಸೋನಿ, 19 ರಲ್ಲಿ ಪೊನ್ನಣ್ಣ, 25 ರಲ್ಲಿ ಪ್ರಜ್ವಲ್ ಗೋಲು ಹೊಡೆದು ಮಿಂಚಿದರು.

ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡವು ಬೇತು ಯೂತ್ ಕ್ಲಬ್ ವಿರುದ್ಧ 3-0 ಗೋಲುಗಳಿಂದ ಜಯಿಸಿತು. ಅಮ್ಮತ್ತಿ ಪರ 17 ನೇ ನಿಮಿಷದಲ್ಲಿ ದಿನೇಶ್, 19 ರಲ್ಲಿ ಕುಟ್ಟಪ್ಪ, 39 ರಲ್ಲಿ ರಾಘವೇಂದ್ರ ತಲಾ ಒಂದೊಂದು ಗೋಲು ಬಾರಿಸಿ ಗೆಲವಿನತ್ತ ಸಾಗಿದರು. ವೀರಾಜಪೇಟೆ ಎಫ್‍ಎಂಸಿ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಬಿ. ವಿರುದ್ಧ 2-0 ಗೋಲುಗಳ ಗೆಲವು ಪಡೆಯಿತು. ವೀರಾಜಪೇಟೆ ಪರ 1 ನೇ ನಿಮಿಷದಲ್ಲಿ ಸೋಮಯ್ಯ, 20 ನೇ ನಿಮಿಷದಲ್ಲಿ ರಕ್ಷಿತ್ ಗೋಲು ಹೊಡೆದು ಮಿಂಚು ಹರಿಸಿದರು.

ಸೋಮವಾರಪೇಟೆ ಡಾಲ್ಪಿನ್ಸ್ ತಂಡದ ಶ್ರೀಮಂಗಲ ಕೊಡವ ಸಮಾಜ ವಿರುದ್ಧ 1-0 ಗೆಲುವು ಪಡೆದು, ಟೂರ್ನಿಯಲ್ಲಿ ಮೊದಲ ಜಯ ಸಾಧನೆ ಮಾಡಿತು. ಆಶಿತ್ 27 ನೇ ನಿಮಿಷದಲ್ಲಿ ಭಾರಿಸಿದ ಏಕೈಕ ಗೆಲವು ತಂದು ಕೊಟ್ಟಿತು. ಅಕ್ಟೋಬರ್ 30, 31 ರಂದು ಟೂರ್ನಿಗೆ ವಿರಾಮ ಘೋಷಿಸಿದ್ದು, ನವೆಂಬರ್ 1 ರಿಂದ ಮತ್ತೆ ಆರಂಭಗೊಳ್ಳಲಿದೆ.