ವೀರಾಜಪೇಟೆ, ಅ. 29: ಪತ್ರಿಕಾವಿತರಕರು ಅತ್ಯಧಿಕ ಮಂದಿಯನ್ನು ಸುಶಿಕ್ಷಿತರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪತ್ರಿಕೆಗಳನ್ನು ಓದುಗರಿಗೆ ತಲಪಿಸಿ ಜಗತ್ತಿನ ವಿದ್ಯಮಾನಗಳನ್ನು ತಿಳಿಸುತ್ತಲೇ ಜ್ಞಾನಾರ್ಜನೆಗೆ ಕಾರಣರಾಗುವ ಪತ್ರಿಕಾವಿತರಕರು ಸಮಾಜದ ಅಮೂಲ್ಯ ಆಸ್ತಿಯಂತಿದ್ದಾರೆ ಎಂದು ರೋಟರಿ ಜಿಲ್ಲಾ ಗವರ್ನರ್ ಜೋಸೇಫ್ ಮ್ಯಾಥ್ಯು ಶ್ಲಾಘಿಸಿದ್ದಾರೆ.
ವೀರಾಜಪೇಟೆ ರೋಟರಿ ಕ್ಲಬ್‍ಗೆ ಅಧಿಕೃತ ಭೇಟಿ ಸಂದರ್ಭ, ವೀರಾಜಪೇಟೆಯಲ್ಲಿ 34 ವರ್ಷಗಳಿಂದ ಪತ್ರಿಕಾವಿತರಕರಾಗಿರುವ ಶುಭಕರ ರಾವ್ ಅವರನ್ನು ಸನ್ಮಾನಿಸಿ ಮಾತನಾಡಿದ ಜೊಸೇಫ್ ಮ್ಯಾಥ್ಯು, ಬೆಳ್ಳಂಬೆಳಗ್ಗೆ ಎದ್ದು ಮಳೆ, ಚಳಿ, ಗಾಳಿಯಲ್ಲಿಯೂ ಪ್ರತಿನಿತ್ಯವೂ ಕಾಯಕ ತಪ್ಪದಂತೆ ಪತ್ರಿಕೆಗಳನ್ನು ನೂರಾರು ಮನೆಗಳಿಗೆ ವಿತರಿಸುತ್ತಿರುವ ಪತ್ರಿಕಾ ವಿತರಕರು ಸ್ವಾರ್ಥರಹಿತ ಸೇವೆಗೆ ಅತ್ಯುತ್ತಮ ನಿದರ್ಶನ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಪತ್ರಿಕಾವಿತರಕ ರಿಂದಲೇ ಲಕ್ಷಾಂತರ ಮಂದಿ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದು ಪ್ರಶಂಶಿಸಿದರು.
ರೋಟರಿ ಜಿಲ್ಲೆಯ ಯೋಜನೆಯಾದ ಜೀವನ್ ಸಂಧ್ಯಾ ಮೂಲಕ ಹಿರಿಯ ನಾಗರಿಕರಿಗೆ ಅನೇಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ ಜೊಸೇಫ್ ಮ್ಯಾಥ್ಯು, ಸೇವ್ ಎ ಲೈಫ್ ಯೋಜನೆ ಮೂಲಕ ಅನೇಕರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಅಗತ್ಯ ನೆರವನ್ನು ನೀಡಲಾಗುತ್ತಿದ್ದು ಉತ್ತಮ ಸ್ಪಂದನೆ ದೊರಕಿದೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ. ನಾಗೇಶ್ ಮಾತನಾಡಿ, ನೊಂದವರಿಗೆ ಮಾಡುವ ಸೇವೆಗೆ ಸೂಕ್ತವಾದ ಪುಣ್ಯಫಲ ಖಂಡಿತಾ ಎಂದರಲ್ಲದೇ, ಸೇವೆಯ ಮಹತ್ತರವಾದ ಕೊಡುಗೆ ರೋಟರಿಯಿಂದ ನಾಗರಿಕ ಸಮಾಜಕ್ಕೆ ಸಿಗುತ್ತದೆ ಎಂದರು.
ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ವೀರಾಜಪೇಟೆ ರೋಟರಿ ಆಯೋಜಿಸಿರುವ ನಾನಾ ಕಾರ್ಯಯೋಜನೆಗಳು ಶ್ಲಾಘನೀಯ ಎಂದರಲ್ಲದೇ ಅರ್ಹರನ್ನೇ ಆಯ್ಕೆ ಮಾಡಿ ಸನ್ಮಾನಿಸಿದ್ದು ಹೆಮ್ಮೆ ತಂದಿದೆ ಎಂದರು. ವೀರಾಜಪೇಟೆ ರೋಟರಿ ನಿರ್ದೇಶಕ ಡಾ. ಎಸ್.ವಿ. ನರಸಿಂಹನ್ ದಾಖಲೆಯ ರೀತಿಯಲ್ಲಿ ವನ್ಯಜೀವಿ ಸಂದೇಶದ ಕಾರ್ಡ್‍ಗಳನ್ನು ಪ್ರತೀ ವರ್ಷ ತಾವೇ ರಚಿಸಿ ಆಸಕ್ತರಿಗೆ ರವಾನಿಸುತ್ತಿರುವ ಬಗ್ಗೆಯೂ ಅನಿಲ್ ಶ್ಲಾಘನೆ ವ್ಯಕ್ತಪಡಿಸಿದರು.
ಮಾಲ್ದಾರೆಯಲ್ಲಿರುವ ಕರ್ನಾಟಕದ ಏಕೈಕ ಮಹಿಳಾ ಚಂಡೆವಾದಕಿಯರ ತಂಡದ ಸದಸ್ಯೆಯರನ್ನು ವೀರಾಜಪೇಟೆ ರೋಟರಿ ಕ್ಲಬ್ ವತಿಯಿಂದ ರೋಟರಿ ಜಿಲ್ಲಾ ಗವರ್ನರ್ ಜೋಸೇಫ್ ಮ್ಯಾಥ್ಯು ಸನ್ಮಾನಿಸಿ ಗೌರವಿಸಿದರು. ಚಂಡೆ ವಾದ್ಯದಂತಹ ಪರಿಶ್ರಮದ ಕಲೆಯನ್ನು ಅಭ್ಯಸಿಸಿ ನಾಡಿಗೆ ಹಿರಿಮೆ ತಂದಿರುವ ಶ್ರೀ ಮುತ್ತಪ್ಪ ಚಂಡೆ ವಾದ್ಯತಂಡದ 7 ಕಲಾವಿದೆಯರು ಸನ್ಮಾನ ಸ್ವೀಕರಿಸಿದರು.
ಇದೇ ಸಂದರ್ಭ ಪಕೃತಿ ವಿಕೋಪ ಸಂದರ್ಭ ತನ್ನ ಅಂಗಡಿಯಲ್ಲಿದ್ದ ನೂತನವಾದ ಬಹುತೇಕ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿ ಮಾನವೀಯತೆ ಮೆರೆದ ವೀರಾಜಪೇಟೆಯ ಫಿರೋಜಾ, ಶೈಕ್ಷಣಿಕ ಸಾಧನೆಗಾಗಿ ವಿದ್ಯಾರ್ಥಿ ನಿಹಾಲ್ ಅವರನ್ನು ಸನ್ಮಾನಿಸಲಾಯಿತು.
ವೀರಾಜಪೇಟೆ ರೋಟರಿ ಕ್ಲಬ್‍ನ ಅಧ್ಯಕ್ಷ ಆದಿತ್ಯ, ಕಾರ್ಯದರ್ಶಿ ಭರತ್ ರಾಮ್ ರೈ, ಜೋನಲ್ ಲೆಫ್ಟಿನೆಂಟ್ ಡಾ. ಎಸ್.ವಿ. ನರಸಿಂಹನ್ ವೇದಿಕೆಯಲ್ಲಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವೆಡೆಗಳಿಂದ ರೋಟರಿ ಪ್ರಮುಖರು ಪಾಲ್ಗೊಂಡಿದ್ದರು. ಮಾಲ್ದಾರೆಯ ಶ್ರೀ ಮುತ್ತಪ್ಪ ಮಹಿಳಾ ಚಂಡೆ ವಾದ್ಯ ಕಾರ್ಯಕ್ರಮದಲ್ಲಿ ಮನ ಸೆಳೆಯಿತು.