ಶ್ರೀಮಂಗಲ, ಅ. 29 : ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೆÇಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಹಕಾರದಲ್ಲಿ ಅಕ್ಟೋಬರ್ 18 ರಂದು ಪವಿತ್ರ ಕಾವೇರಿ ತೀರ್ಥವನ್ನು ಭಕ್ತಾದಿಗಳಿಗೆ ವಿತರಿಸುವದರೊಂದಿಗೆ ಆರಂಭವಾಗಿ ಪ್ರತಿದಿನ ಸಂಜೆ ಜನೋತ್ಸವ ರೀತಿಯಲ್ಲಿ ಸಂಗೀತ, ನೃತ್ಯಗಳೊಂದಿಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನೊಳಗೊಂಡ 3ನೇ ವರ್ಷದ ‘ಚಂಗ್ರಾಂದಿ ಪತ್ತಲೋದಿ’ಯ ಯಶಸ್ವಿ ಆಚರಣೆಗೆ ತೆರೆ ಬಿದ್ದಿದೆ.
ಕಾರ್ಯಕ್ರಮದ ಅಂತಿಮ ದಿನ ಸಂಜೆ 7ರಿಂದ 9 ಗಂಟೆಯವರೆಗೆ ನಡೆದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕೊಡವ ಸಂಗೀತ ಗೋಷ್ಠಿ, ಗೋಣಿಕೊಪ್ಪ ಕಾವೇರಿ ಮಾಸ್ಟರ್ಸ್ ಹಾಗೂ ಚೆಟ್ಟಂಗಡ ಕೋಯಲ್ ಬೋಪಯ್ಯ ಸಂಗಡಿಗರ ನೃತ್ಯ ವೈಭವ ನಡೆಯಿತು. ಸಂಗೀತ ಗೋಷ್ಠಿಯಲ್ಲಿ ಖ್ಯಾತ ಗಾಯಕರಾದ ಚಕ್ಕೇರ ಪಂಚಮ್ ತ್ಯಾಗರಾಜ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಬಟ್ಟಿಯಂಡ ಲಿಖಿತ ಪಳಂಗಪ್ಪ ಹಾಗೂ ಮಾಳೇಟಿರ ಅಜಿತ್ ಪೂವಣ್ಣ ಹಾಡುಗಾರಿಕೆ ಜನಮೆಚ್ಚುಗೆ ಪಡೆಯಿತು.
ಮುಖ್ಯ ಅತಿಥಿಗಳಾಗಿ ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ, ತಡಿಯಂಗಡ ಡಾಲಿ ನಾಚಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ವಹಿಸಿದ್ದರು.
ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಚಂಗ್ರಾಂದಿ ಪತ್ತಲೋದಿ ಆಚರಣೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಆಶ್ವಿನಿ ಸತೀಶ್ ಪ್ರಾರ್ಥಿಸಿ, ಕ್ರೀಡೆ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಸ್ವಾಗತಿಸಿ, ಉಪಾಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ವಂದಿಸಿದರು.
ವೇದಿಕೆಯಲ್ಲಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿಯ ಪದಾಧಿಕಾರಿ ಉಳುವಂಗಡ ದತ್ತ, ಸಂಭ್ರಮ ಪೆÇಮ್ಮಕ್ಕಡ ಸಂಸ್ಥೆಯ ಕಾರ್ಯದರ್ಶಿ ಉಳುವಂಗಡ ಕಾವೇರಿ ಉದಯ, ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್, ನಿರ್ದೇಶಕ ಮಾಣೀರ ವಿಜಯ ನಂಜಪ್ಪ ಉಪಸ್ಥಿತರಿದ್ದರು. ಈ ಸಂದರ್ಭ ಚಂಗ್ರಾಂದಿ ಪತ್ತಲೋದಿ ಆಚರಣೆಯ ರೂವಾರಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯರವರನ್ನು ಸನ್ಮಾನಿಸಲಾಯಿತು.