ವೀರಾಜಪೇಟೆ, ಅ. 29: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಆರೋಪದ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಸಿ.ಜಿ. ಥೋಮಸ್ (24) ಹಾಗೂ ಇದಕ್ಕೆ ಸಹಕರಿಸಿದ ಇತರ 4 ಮಂದಿ ಸೇರಿದಂತೆ ಒಟ್ಟು ಐದು ಮಂದಿಯನ್ನು ಪೊಕ್ಸೋ ಕಾಯಿದೆಯಡಿ ಬಂಧಿಸಿ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ 5 ಮಂದಿಯನ್ನು 15 ದಿನಗಳ ತನಕ ನ್ಯಾಯಾಂಗ ಬಂದನಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಥೋಮಸ್ ನಾಪೋಕ್ಲಿನ ಗ್ಯಾರೇಜ್ ನಲ್ಲಿ ಮೆಕಾನಿಕ್ ಕೆಲಸದಲ್ಲಿದ್ದು, ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿ ದ್ದುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ತಾ. 25ರಂದು ಆಕೆಯನ್ನು ಯಾರೋ ಅಪಹರಣ ಮಾಡಿರುವದಾಗಿ ಬಾಲಕಿಯ ಚಿಕ್ಕಮ್ಮ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತೆ ಬಾಲಕಿ ತಾ. 26ರಂದು ಅಜ್ಜಿ ಮನೆಯಲ್ಲಿ ಪತ್ತೆಯಾದ ನಂತರ ತಾ. 27ರಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಳು. ಬಾಲಕಿ ಸಂತ್ರಸ್ತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ಆಸ್ಪತ್ರೆಯಿಂದ ಪೊಲೀಸರಿಗೆ ಸಂದೇಶ ರವಾನೆಯಾಗಿತ್ತು. ಸಂದೇಶದ ನಂತರ ತನಿಖೆ ನಡೆಸಿದ ಪೊಲೀಸರು ಥೋಮಸ್‍ಗೆ ಸಹಕರಿಸಿದ ಅಭಿಲಾಶ್, ಪ್ರಸನ್ನ, ಪ್ರಸಾದ್ ಹಾಗೂ ಜಾನ್‍ಸನ್ ಇವರ ಮೇಲೂ ಪ್ರಕರಣ ದಾಖಲಿಸಿದ್ದಾರೆ.