ವೀರಾಜಪೇಟೆ, ಅ. 29: ಗಾಂಜಾವನ್ನು ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದ ಮೇರೆ ನಗರ ಪೊಲೀಸರು ಮೀನುಪೇಟೆಯ ಷಂಶುದ್ದೀನ್ ಎಂಬಾತನ ಮನೆ ಮೇಲೆ ಧಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಒಂದು ಕೆ.ಜಿ. 250 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಮನೆಯ ಮಾಲೀಕ ಷಂಶುದ್ದೀನ್‍ನನ್ನು ಬಂಧಿಸಿದ್ದಾರೆ.ಆರೋಪಿ ಷಂಶುದ್ದೀನ್‍ಗೆ ಗಾಂಜಾ ದಾಸ್ತಾನಿಗೆ ಸಹಕರಿಸಿದ್ದಲ್ಲದೆ ಜೇಬಿನಲ್ಲಿ ಗಾಂಜಾದ ಎರಡು ಸಣ್ಣ ಪ್ಯಾಕೆಟ್‍ಗಳನ್ನಿಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐಮಂಗಲ ಗ್ರಾಮದ ಬೆಳ್ಳಿಯಪ್ಪ ಎಂಬಾತನನ್ನು ಕೂಡ ಬಂಧಿಸಲಾಗಿದ್ದು, ಇಬ್ಬರನ್ನು ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ನಗರ ಪೊಲೀಸರು ಈ ಪ್ರಕರಣದಲ್ಲಿ ಷಂಶುದ್ದೀನ್‍ಗೆ ಗಾಂಜಾ ಸರಬರಾಜು ಮಾಡಿದ ಎ.ರಫೀಕ್ ಎಂಬಾತನ ವಿರುದ್ಧವು ಪ್ರಕರಣ ದಾಖಲಿಸಿದ್ದು, ಆತ ತಲೆಮರೆಸಿಕೊಂಡಿರುವದಾಗಿ ತಿಳಿಸಿದ್ದಾರೆ.

ಡಿವೈಎಸ್‍ಪಿ ಜಯಕುಮಾರ್ ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ ಮಾರ್ಗದರ್ಶನದಲ್ಲಿ ಎಸ್.ಐ. ಮರಿಸ್ವಾಮಿ, ಪೊಲೀಸ್ ಪೇದೆಗಳಾದ ಸುನಿಲ್, ಮುನೀರ್, ನಳಿನಿ, ಗಿರೀಶ್ ಹಾಗೂ ಉದಯ ದಾಳಿಯಲ್ಲಿ ಭಾಗವಹಿಸಿದ್ದರು.