ಕುಶಾಲನಗರ, ಅ. 28: ಪ್ರವಾಹ ಸಮಸ್ಯೆ ತಪ್ಪಿಸಲು ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯ ಹೂಳೆತ್ತಲು ಕಾರ್ಯಯೋಜನೆ ರೂಪಿಸಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 9ನೇ ವರ್ಷದ ತಲಕಾವೇರಿ-ಪೂಂಪ್‍ಹಾರ್ ಯಾತ್ರಾ ತಂಡ ಕುಶಾಲನಗರದಲ್ಲಿ ಜೀವನದಿಗೆ ಕಾವೇರಿ ವಿಶೇಷ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ನದಿ ಪ್ರವಾಹಕ್ಕೆ ತುತ್ತಾಗುವದರೊಂದಿಗೆ ಜನರ ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತಿದೆ. ಈ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ನದಿಯ ಒಡಲು ಸೇರಿರುವ ಹೂಳನ್ನು ತೆರವುಗೊಳಿಸಿ ನದಿ ತಟಗಳಲ್ಲಿ ತಡೆಗೋಡೆ ನಿರ್ಮಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದರು.
ಕಾವೇರಿ ನದಿ ಸ್ವಚ್ಛತೆ ಮತ್ತು ಸಂರಕ್ಷಣೆ ನಿಟ್ಟಿನಲ್ಲಿ ಕಳೆದ 9 ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಆಂದೋಲನ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಈ ಸಂಬಂಧ ಸರಕಾರದ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಭರವಸೆ ವ್ಯಕ್ತಪಡಿಸಿದರು. ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರು ಹಮ್ಮಿಕೊಂಡಿರುವ ಯಾತ್ರೆಗೆ ಶುಭ ಕೋರಿದ ಶಾಸಕರು ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕಿದೆ ಎಂದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ನದಿಗಳ ಸಂರಕ್ಷಣೆ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಿಂದ ಎಲ್ಲಾ ಹಂತದಲ್ಲಿಯೂ ಕಾರ್ಯಯೋಜನೆಗಳು ಸಿದ್ಧವಾಗಬೇಕಾಗಿದೆ. ಸ್ವಚ್ಛ ಕಾವೇರಿ ನಿರ್ಮಾಣ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಕಾವೇರಿ ಜಾಗೃತಿ ಯಾತ್ರೆ ತಂಡದ ಪ್ರಮುಖರಾದ ವೇದಾಂತ ಆನಂದ ಸ್ವಾಮೀಜಿ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ಭಾಗದಲ್ಲಿ ಹರಿಯುತ್ತಿರುವ ಕಾವೇರಿ ಸಮುದ್ರ ತನಕ ನೀರು ಹರಿಯಬೇಕಾದಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಾಗಬೇಕು. ಈ ಸಂದರ್ಭ ಜಿಲ್ಲೆಯ ಜನರಿಗೆ ಆಗುವ ಅನಾನುಕೂಲಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸ್ಪಂದನ ನೀಡಬೇಕು ಎಂದು ಆಗ್ರಹಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪರವಾಗಿ ಅಖಿಲ ಭಾರತ ಸನ್ಯಾಸಿ ಸಂಘದ ಕಾರ್ಯದರ್ಶಿ ಸ್ವಾಮಿ ಆತ್ಮಾನಂದ ಅವರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಜೀವನದಿಗೆ 100ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮ ಅಂಗವಾಗಿ ನವೆಂಬರ್ ತಿಂಗಳ ಅಂತ್ಯದಲ್ಲಿ ಎರಡು ದಿನಗಳ ಕಾಲ ಕಾವೇರಿ ನದಿ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು.
ಯಾತ್ರಾ ತಂಡದ ರಥದಲ್ಲಿ ಸಾಗುವ ಕಾವೇರಿ ಮಾತೆಯ ವಿಗ್ರಹಕ್ಕೆ ವಿವಿಧ ರೀತಿಯ ಅಭಿಷೇಕ ನೆರವೇರಿಸಲಾಯಿತು. ಮುಖ್ಯ ಅರ್ಚಕ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಪೂಜಾ ವಿಧಿವಿಧಾನಗಳ ನಂತರ ಶಾಸಕ ಅಪ್ಪಚ್ಚುರಂಜನ್ ಸೇರಿದಂತೆ ಸಾಧುಸಂತರ ತಂಡದ ಸದಸ್ಯರು ಸಾಮೂಹಿಕವಾಗಿ ನದಿಗೆ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಪ್ರಮುಖರಾದ ಶಿವಾನಂದ ಸುಂದರಾನಂದ ಸ್ವಾಮೀಜಿ, ಜ್ಞಾನೇಶ್ವರಿ ಗಿರಿ ಮಾತಾಜಿ, ಅರುಳ್ ವೀರಮಣಿ, ಪ.ಪಂ. ಸದಸ್ಯ ಅಮೃತ್‍ರಾಜ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಎಂ.ಎಂ. ಚರಣ್, ಪ್ರಮುಖರಾದ ಶಿವಾಜಿ, ವೈಶಾಖ್, ಬಿ.ಜೆ. ಅಣ್ಣಯ್ಯ, ಕಾವೇರಿ ಸ್ವಚ್ಛತಾ ಆಂದೋಲನ ಪ್ರಮುಖರಾದ ಕುಮಾರಸ್ವಾಮಿ, ಸಿದ್ದರಾಜು, ಡಿ.ಆರ್. ಸೋಮಶೇಖರ್, ವನಿತಾ ಚಂದ್ರಮೋಹನ್ ಅಕ್ಷಯ್ ಪನ್ಯಾಡಿ ಮತ್ತಿತರರು ಇದ್ದರು.