ಕೂಡಿಗೆ, ಅ. 28: ಕೂಡಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ವ್ಯವಸ್ಥೆಯ ಪೈಪ್‍ಗಳನ್ನು ಹಾಗೂ ವಾಶ್‍ಬೇಸನ್ ಸೇರಿದಂತೆ ಶೌಚಾಲಯಗಳ ಬೀಗಗಳನ್ನು ಮುರಿದು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ನಡೆದಿದೆ. ಶಾಲೆಯ ಸುತ್ತಲು ತಡೆಗೋಡೆಯನ್ನು ನಿರ್ಮಿಸಿದ್ದರೂ ಸಹ, ಶಾಲಾ ರಜಾ ದಿನಗಳಲ್ಲಿ ಕಿಡಿಗೇಡಿಗಳು ಶಾಲಾವರಣಕ್ಕೆ ನುಗ್ಗಿ, ಅಲ್ಲಿನ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ಶಾಲೆಯ ಆವರಣದಲ್ಲಿರುವ ತೆಂಗಿನ ಮರದಿಂದ ಎಳನೀರುಗಳನ್ನು ಕಿತ್ತು ಹಾಕಿ, ಗಲೀಜು ಮಾಡಿದ್ದಾರೆ. ಇದೀಗ ಕುಡಿಯುವ ನೀರಿನ ಪೈಪ್‍ಗಳನ್ನು ಒಡೆದು ಹಾಕಿರುವದರಿಂದ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲದೆ, ಶೌಚಾಲಯಕ್ಕೂ ನೀರಿಲ್ಲದೆ, ಪರದಾಡುವ ಸ್ಥಿತಿಯಲ್ಲಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಲಾಭಿವೃದ್ಧಿ ಸಮಿತಿ ಸಭೆ ಸೇರಿ ಕೂಡಿಗೆ ಗ್ರಾಮ ಪಂಚಾಯಿತಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ ಮಾಡಿಕೊಳ್ಳಲಾಗಿದೆ.ಕಿಡಿಗೇಡಿಗಳ ಇಂತಹ ಕೆಲಸಕ್ಕೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.