ಭಾಗಮಂಡಲ,ಅ. 28: ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲಿ ಶನಿವಾರ ರಾತ್ರಿ ಭಾರೀ ನೀರಿನ ಸದ್ದು ಕೇಳಿಬಂದಿದ್ದು ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆದ ಘಟನೆ ನಡೆದಿದೆ. ಶನಿವಾರ ರಾತ್ರಿ ಅಯ್ಯಂಗೇರಿಯ ಬೆಟ್ಟ ಪ್ರದೇಶದಲ್ಲಿ ರಾತ್ರಿ 9.30ರ ವೇಳೆಗೆ ಭಾರೀ ನೀರಿನ ಸದ್ದು ಕೇಳಿ ಬಂದಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿಯಿಡಿ ಆತಂಕದಿಂದ ಕಾಲ ಕಳೆದಿದ್ದಾರೆ. ಭಾನುವಾರ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ರಾಹುಲ್, ತಹಶೀಲ್ದಾರ್ ಮಹೇಶ್ ಹಾಗೂ ಭಾಗಮಂಡಲ ಠಾಣಾಧಿಕಾರಿ ಮಹದೇವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಯ್ಯಂಗೇರಿಯ ಚಿನ್ನತಪ್ಪ ದೇವಾಲಯದ ಸಮೀಪ ಎರಡು ಜಲಪಾತಗಳು ಧುಮ್ಮುಕ್ಕುತ್ತಿದ್ದು ಎಡೆಬಿಡದೇ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ರಭಸದಿಂದ ನೀರು ಹರಿದ ಪರಿಣಾಮ ಸದ್ದು ಕೇಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಒಂದು ವಾರದಿಂದ ಬಿರುಸಿನ ಮಳೆಯಾಗಿದ್ದು ನದಿತೊರೆಗಳು ಉಕ್ಕಿ ಹರಿದಿದ್ದವು. ಮಳೆ ಗಾಳಿಯ ರಭಸಕ್ಕೆ ಜಲಪಾತದ ಭೋರ್ಗರೆತ ಗ್ರಾಮಸ್ಥರ ಅರಿವಿಗೆ ಬಂದಿರಲಿಲ್ಲ. ಮಳೆಯ ಬಿರುಸು ಕಡಿಮೆಯಾಗು ತ್ತಿದ್ದಂತೆ ಭಾರೀ ನೀರಿನ ಸದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು. - ಕೆ.ಡಿ.ಸುನಿಲ್