ಮಡಿಕೇರಿ, ಅ. 26: ದಕ್ಷಿಣ ಗಂಗೆ, ಕೊಡಗಿನ ಕುಲದೇವಿ, ಜೀವನದಿ ಎಂಬಿತ್ಯಾದಿ ಶ್ರದ್ಧೆಯಿರುವ ಕಾವೇರಿಯ ಉಗಮ ಸ್ಥಳ ತಲಕಾವೇರಿ ಹಾಗೂ ದಕ್ಷಿಣ ಪ್ರಯಾಗ ಖ್ಯಾತಿಯ ಭಾಗಮಂಡಲ ದಲ್ಲಿ ಕ್ಷೇತ್ರದ ಪಾವಿತ್ರ್ಯ ಕಾಪಾಡುವ ದಿಸೆಯಲ್ಲಿ ಈ ಹಿಂದೆ ಅಷ್ಟಮಂಗಲ ದಲ್ಲಿ ಲಭಿಸಿರುವ ನಿರ್ದೇಶನದಂತೆ ಕಟ್ಟುಪಾಡುಗಳನ್ನು ಜಾರಿಗೊಳಿಸ ಲಾಗಿದೆ. ಕ್ಷೇತ್ರದಲ್ಲಿ ಭಕ್ತರಿಗಾಗಿ ತುಲಾಭಾರ ಸೇವೆಗೂ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹಾಗೂ ಕ್ಷೇತ್ರದ ಹಿರಿಯ ಅರ್ಚಕ ಟಿ.ಎಸ್. ನಾರಾಯಣಾಚಾರ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ತಾ. 18ರ ರಾತ್ರಿ 12.59ಕ್ಕೆ ಕಾವೇರಿ ತೀರ್ಥೋದ್ಭವ ಸಂದರ್ಭ ದಿನವಿಡೀ ಸುರಿದಿದ್ದ ಮಳೆ ನಿಂತು ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಗಣ್ಯರು ಪುಣ್ಯ ತೀರ್ಥೋದ್ಭ ವವನ್ನು ಕಣ್ಣು ತುಂಬಿಕೊಳ್ಳಲು ಅವಕಾಶ ನೀಡಿ, ಆ ಕಾವೇರಿ ತಾಯಿ ಇರುವಿಕೆಯನ್ನು ಭಕ್ತರಲ್ಲಿ ಸಾಕ್ಷೀಕರಿಸಿದ್ದಾಗಿ ಬಣ್ಣಿಸಿದರು.ಹೀಗಾಗಿ ಕ್ಷೇತ್ರದಲ್ಲಿ ಹಿಂದಿನ ಪೂಜಾ ಕ್ರಮ, ಕಟ್ಟುಪಾಡುಗಳನ್ನು ಅನುಷ್ಠಾನಗೊಳಿಸಿ ಪಾವಿತ್ರ್ಯ ರಕ್ಷಣೆಗೆ ಎಲ್ಲ ರೀತಿಯ ಗಮನ ಕೊಡ ಲಾಗುತ್ತದೆ ಎಂದು ನುಡಿದರಲ್ಲದೆ, ಕೊಡಗು ಜಿಲ್ಲೆಯೂ ಸೇರಿದಂತೆ ಹೊರಗಿನಿಂದ ಕ್ಷೇತ್ರಕ್ಕೆ ಬರುವವರು ನಿಯಮಗಳನ್ನು ಪಾಲಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಕಳಕಳಿ ವ್ಯಕ್ತಪಡಿಸಿದರು.ತಾಮ್ರ ಕೊಡಗಳು ಸಾಕ್ಷಿ : ಈ ಬಾರಿ ಸ್ವಚ್ಛ ಭಾರತ ಅಭಿಯಾನದ ರೂವಾರಿಯಾಗಿರುವ ದೇಶದ ಪ್ರಧಾನಿ (ಮೊದಲ ಪುಟದಿಂದ) ನರೇಂದ್ರ ಮೋದಿ ಅವರ ಆಶಯದಂತೆ ತೀರ್ಥೋದ್ಭವ ಸಂದರ್ಭ ಪ್ಲಾಸ್ಟಕ್ ಬಿಂದಿಗೆ ಇತ್ಯಾದಿ ನಿಷೇದಿಸಿ ಭಕ್ತರಿಂದ ತಾಮ್ರ ಇತ್ಯಾದಿ ಪಾತ್ರೆಗಳು ತೀರ್ಥ ಕೊಂಡೊಯ್ಯಲು ತರುವಂತೆ ಕೋರಿದಾಗ ಸಮಿತಿಗೆ ಲಭಿಸಿದ ಸ್ಪಂದನ ಭಕ್ತರ ಮನಃಪರಿವರ್ತನೆಗೆ ಸಾಕ್ಷಿಯೆಂದು ಅವರಿಬ್ಬರು ನೆನಪಿಸಿದರು.ಹೀಗಾಗಿ ಹಿಂದಿನ ಪರಂಪರೆಯಂತೆ ಕಾವೇರಿ ತಾಯಿ ಎದುರು ಸದ್ಭಕ್ತರಿಂದ ತುಲಾಭಾರ ಸೇವೆ ಕಲ್ಪಿಸಿದ್ದು, ಈ ಸೇವೆಯಿಂದ ಬರುವ ಧಾನ್ಯ, ದ್ರವ್ಯಗಳನ್ನು ಸದ್ಭಕ್ತರ ಅನ್ನಧಾನದ ಮತ್ತು ಪೂಜಾ ಕೈಂಕರ್ಯಗಳಿಗೆ ಸದ್ಬಳಕೆ ಮಾಡಲಾಗುವದು ಎಂದು ಅರ್ಚಕರು ಹಾಗೂ ಅಧ್ಯಕ್ಷರು ವಿವರಣೆ ನೀಡಿದರು.

ಶತಮಾನದ ಬಿಂದಿಗೆ : ದಕ್ಷಿಣ ಕೊಡಗಿನ ಕೈಕೇರಿ ಬಳಿಯ ಕೊಲ್ಲಿರ ಕುಟುಂಬದವರು ಸುಮಾರು 170 ವರ್ಷಗಳ ಹಿಂದಿನ ಹಿತ್ತಾಳೆ ಬಿಂದಿಗೆ ತಂದು ಈ ಬಾರಿ ಕಾವೇರಿ ತೀರ್ಥ ಕೊಂಡೊಯ್ದಿದ್ದು ವಿಶೇಷವೆಂದ ಬಿ.ಎಸ್. ತಮ್ಮಯ್ಯ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕೊಕ್ಕಲೇರ ತಿಮ್ಮಯ್ಯ ಹಾಗೂ ಸಂಗಡಿಗರು ಕ್ಷೇತ್ರಕ್ಕೆ 20 ತಾಮ್ರದ ಬಿಂದಿಗೆಗಳೊಂದಿಗೆ ಭಕ್ತರು ತೀರ್ಥ ಸಂಗ್ರಹಿಸಿ ಒಯ್ಯಲು ವಿಶೇಷ ಕೊಡುಗೆ ನೀಡಿರುವದಾಗಿ ಬೊಟ್ಟು ಮಾಡಿದರು.

ಈ ರೀತಿ ಎಲ್ಲ ರೀತಿ ಸದ್ಭಕ್ತರು ಮತ್ತು ದಾನಿಗಳು ಕ್ಷೇತ್ರದ ಏಳಿಗೆಗೆ ಕೈಜೋಡಿಸಿದ್ದು, ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯೊಂದಿಗೆ ರಾಜ್ಯ ಸರಕಾರ, ಸಚಿವರುಗಳು, ಜಿಲ್ಲೆಯ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಭಾಗಮಂಡಲ ಗ್ರಾ.ಪಂ. ಹಾಗೂ ವ್ಯವಸ್ಥಾಪನಾ ಸಮಿತಿಯು ಕೊಡಗು ಏಕೀಕರಣ ರಂಗದ ಸಹಕಾರದಿಂದ ಮುಂದಿನ ಕಿರು ಸಂಕ್ರಮಣ ತನಕ ಜಾತ್ರೆಯ ಯಶಸ್ಸಿಗೆ ಮುಂದಾಗಿರುವದಾಗಿ ಮುಕ್ತ ನುಡಿಯಾಡಿದರು.