ಮಡಿಕೇರಿ, ಅ. 28: ಪ್ರಸಕ್ತ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು, ಈ ಬಾರಿ ಕೊಡಗಿನ ಇಬ್ಬರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು 64 ಮಂದಿಗೆ ಈ ಬಾರಿ ರಾಜ್ಯ ಸರಕಾರ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಪೈಕಿ ಕೊಡಗಿನ ಇಬ್ಬರು ಈ ಸಾಲಿನಲ್ಲಿರುವದು ಗಮನಾರ್ಹವಾಗಿದೆ.
ಭಾರತದ ಮುಖ್ಯ ಬಾಕ್ಸಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದೇಶವನ್ನು ಬಾಕ್ಸಿಂಗ್ನಲ್ಲಿ ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನೂ ಪಡೆದಿರುವ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಮೂಲತಃ ಜಿಲ್ಲೆಯ ಕೋಕೇರಿಯವರಾದ ಚೇನಂಡ ಎ. ವಿಶು ಕುಟ್ಟಪ್ಪ ಹಾಗೂ ಮಡಿಕೇರಿ ತಾಲೂಕಿನ ಬಿಳಿಗೇರಿಯವರಾದ ಭಾರತೀಯ ಸೇನೆಯಲ್ಲಿ, ರಕ್ಷಣಾ ಪಡೆಗಳ ವೈದ್ಯಕೀಯ ವಿಭಾಗದ (ಹಾಸ್ಪಿಟಲ್ ಸರ್ವೀಸಸ್) ಮಹಾನಿರ್ದೇಶಕರಾಗಿದ್ದ ನಿವೃತ್ತ ಲೆ.ಜ. ಬಿ.ಎನ್. ಮಹಾವೀರ ಪ್ರಸಾದ್ (ಎಸ್.ಎಂ., ವಿ.ಎಸ್.ಎಂ.) ಅವರುಗಳಿಗೆ ಪ್ರಶಸ್ತಿ ಲಭ್ಯವಾಗಿದೆ.
ಸಂತಸ ತಂದಿದೆ: ಕುಟ್ಟಪ್ಪ
ಬಾಕ್ಸಿಂಗ್ನಲ್ಲಿ ತಾವು ಮುಖ್ಯ ಕೋಚ್ ಆಗಿದ್ದು, ಉತ್ತರ ಭಾರತದಲ್ಲಿ ಹಾಗೂ ಬಾಕ್ಸಿಂಗ್ ಕುಟುಂಬದಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟಿದ್ದೇನೆ. ಇದೀಗ ಕರ್ನಾಟಕ ರಾಜ್ಯ ಸರಕಾರವು ತಮ್ಮನ್ನು ಪರಿಗಣಿಸಿ ಪ್ರಶಸ್ತಿಗೆ
(ಮೊದಲ ಪುಟದಿಂದ) ಆಯ್ಕೆ ಮಾಡುವ ಮೂಲಕ ತಮ್ಮ ರಾಜ್ಯಕ್ಕೂ ಪರಿಚಯಿಸುತ್ತಿರುವದು ಸಂತಸ ತಂದಿದೆ ಎಂದು ಎರಡು ವರ್ಷದ ಹಿಂದೆ ಬಾಕ್ಸಿಂಗ್ ತರಬೇತಿಗಾಗಿ, ಭಾರತ ಸರಕಾರ ನೀಡುವ ಉನ್ನತ ಪ್ರಶಸ್ತಿಯಾದ ದ್ರೋಣಾಚಾರ್ಯ ಬಿರುದು ಗಳಿಸಿರುವ ವಿಶುಕುಟ್ಟಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಆರಂಭದಲ್ಲಿ ಬೆಂಗಳೂರಿನಿಂದ ಎಂ.ಇ.ಜಿ. ಮೂಲಕ ಬಾಕ್ಸಿಂಗ್ ಕ್ಷೇತ್ರಕ್ಕೆ ಪದಾರ್ಪಣೆಗೊಂಡಿದ್ದ ಕುಟ್ಟಪ್ಪ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವತಃ ಬಾಕ್ಸಿಂಗ್ ಪಟುವಾಗಿಯೂ ಸ್ಪರ್ಧಿಸಿದ್ದು, ಸುಮಾರು 25ರಿಂದ 30 ಪದಕ ಗಳಿಸಿದ್ದಾರೆ. ಸುಬೇದಾರ್ ಆಗಿರುವ ಇವರು ಪ್ರಸ್ತುತ ಇಂಡಿಯನ್ ಸ್ಪೋಟ್ರ್ಸ್ ಇನ್ಸ್ಟಿಟ್ಯೂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗೌರವ ದೊರೆತಿದೆ : ಪ್ರಸಾದ್
ಭಾರತೀಯ ಸೇನೆಯಲ್ಲಿ ಕೊಡಗಿನವರು ಎಂದರೆ ಹೆಚ್ಚು ಗೌರವವಿದೆ ಎಂದು ಸ್ಮರಿಸಿಕೊಂಡಿರುವ ಡಾ. ಬಿ.ಎನ್. ಮಹಾವೀರ ಪ್ರಸಾದ್ ಅವರು ಸರಕಾರ ತಮ್ಮನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವದು ತಮಗೂ ಹೆಚ್ಚಿನ ಗೌರವ ಲಭಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಫೀ.ಮಾ. ಮಾಣಿಕ್ ಷಾ, ಲೋಕಸಭಾ ಸ್ಪೀಕರ್, ಸೋಮನಾಥ ಚೆಟರ್ಜಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ವೈದ್ಯಕೀಯ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ಚೀಫ್ ಕನ್ಸಲ್ಟೆಂಟ್ ಆಫ್ ಇಂಡಿಯನ್ ಆರ್ಮ್ಡ್ ಫೋರ್ಸ್ ಆಗಿದ್ದ ಡಾ. ಪ್ರಸಾದ್ ಪ್ರಸ್ತುತ ಜೋಧ್ಪುರದಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಶ್ವಾಸಕೋಶ ವಿಭಾಗದ ಮುಖ್ಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಿಂದ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ 8 ಮಂದಿಯನ್ನು ಶಿಫಾರಸ್ಸು ಮಾಡಲಾಗಿತ್ತಾದರೂ ಅಂತಿಮವಾಗಿ ಇಬ್ಬರಿಗೆ ಪ್ರಶಸ್ತಿ ಘೋಷಣೆಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.