ಕುಶಾಲನಗರ, ಅ. 28: ಆರೋಪಿಯೊಬ್ಬನನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಲು ಕರೆತಂದ ಸಂದರ್ಭ ಪರಾರಿಯಾದ ಘಟನೆ ಕುಶಾಲನಗರ ನ್ಯಾಯಾಲಯ ಆವರಣದಲ್ಲಿ ಸೋಮವಾರ ಸಂಜೆ ನಡೆದಿದೆ. ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ರಾಮು (40) ಎಂಬಾತ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ವ್ಯಕ್ತಿ. ಅಕ್ಟೋಬರ್ ಎರಡನೇ ವಾರದಲ್ಲಿ ಕುಶಾಲನಗರ ಸಮೀಪ ಬೆಂಡೆಬೆಟ್ಟ ಬಳಿಯ ಮಹಿಳೆ ಯೊಬ್ಬಳನ್ನು ಹಲ್ಲೆ ಮಾಡಿ ಕೊಲೆಗೈದ ಪ್ರಕರಣ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ರಾಮುವನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಕರೆ ತಂದಿದ್ದರು. ಈ ಸಂದರ್ಭ ಆರೋಪಿ ನ್ಯಾಯಾಲಯ ಕಟ್ಟಡದಲ್ಲಿ ಶೌಚಾಲಯಕ್ಕೆ ತೆರಳಬೇಕೆಂದ ಹಿನ್ನೆಲೆಯಲ್ಲಿ ಪೊಲೀಸರು ಕೈಕೋಳ ಬಿಚ್ಚಿ ಕಳುಹಿಸಿದ್ದರು.ಇದೇ ಸಂದರ್ಭ ಸಮಯ ಸಾಧಿಸಿ ರಾಮು ಶೌಚಾಲಯ ಕೊಠಡಿಯ ವೆಂಟಿಲೇಟರ್ ಕಿಂಡಿ ಮೂಲಕ ಹಾರಿ ಮಹಡಿಯಿಂದ ಜಿಗಿದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಬೆನ್ನಟ್ಟಿದರೂ ಪತ್ತೆಯಾಗಿಲ್ಲ.ನ್ಯಾಯಾಲಯದ ಹೊರ ಭಾಗದಲ್ಲಿ ಭಾರೀ ಪೊದೆಗಳ ನಡುವೆ ಓಡಿದ ಆರೋಪಿ ಮುಖ್ಯರಸ್ತೆ ದಾಟಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಮತ್ತು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಸಂಜೆ ತನಕ ಹುಡುಕಾಡಿದರೂ ಪತ್ತೆಯಾಗಿಲ್ಲ. ರಸ್ತೆ ದಾಟಿ ತೆರಳಿದ ವ್ಯಕ್ತಿಯೊಬ್ಬನ ಬಗ್ಗೆ ಸ್ಥಳೀಯರು ಗಮನಿಸಿರುವದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ರಾಮು ಈ ಹಿಂದೆ ಪ್ರಕರಣವೊಂದರ ಸಂಬಂಧ ಎರಡು ವರ್ಷ ಜೈಲುವಾಸ ಅನುಭವಿಸಿ ಬಂದಿದ್ದ ಎನ್ನಲಾಗಿದೆ. ಮೂಲತ ಯಡವನಾಡು ಬಳಿಯ ಸೂಳೆಬಾವಿ ಹಾಡಿಯ ನಿವಾಸಿಯಾಗಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ವಿವರ : ಹಾರಂಗಿ ಅಣೆಕಟ್ಟೆ ಬಳಿಯ ಹಳೆ ನರ್ಸರಿ ಸಮೀಪ ಮಹಿಳೆಗೆ ಹಲ್ಲೆ ಮಾಡಿ ಹತ್ಯೆಗೈದು ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಕಾಡು ಪ್ರದೇಶದ ಮರದ ಪೊಟರೆಗೆ ತುರುಕಿದ್ದುದು ಕಳದ ತಾ. 15ರಂದು ಪತ್ತೆಯಾಗಿತ್ತು. ಆ ಪ್ರದೇಶದ ಬೀದಿ ನಾಯಿಗಳು ಮೃತದೇಹದ ಮಾಂಸ ಖಂಡ ಕಚ್ಚಿಕೊಂಡು ಬಂದ ಸಂದರ್ಭ

(ಮೊದಲ ಪುಟದಿಂದ) ಸ್ಥಳೀಯ ಗ್ರಾಮಸ್ಥರು ಗಮನಿಸಿ ಪರಿಶೀಲಿಸಿದಾಗ ಮಹಿಳೆಯ ಮೃತ ದೇಹ ಕಂಡುಬಂದಿದೆ.

ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದರು. ಮೃತ ಮಹಿಳೆ ಬೆಂಡೆಬೆಟ್ಟ ಹಾಡಿಯ ರವಿ ಎಂಬವರ ಪತ್ನಿ ಪಾಪಮ್ಮ (38) ಎಂದು ಗುರುತಿಸಲಾಗಿತ್ತು. ಈಕೆಗೆ ಈಗಾಗಲೆ ವಿವಾಹವಾಗಿ ನಾಲ್ವರು ಮಕ್ಕಳಿದ್ದು ಇತ್ತೀಚೆಗೆ ಅವಿವಾಹಿತ ಯುವಕ ರಾಮು ಎಂಬಾತನೊಂದಿಗೆ ಸಂಬಂಧ ಬೆಳೆಸಿ ಪಾಳು ಬಿದ್ದಿದ್ದ ಮನೆಯೊಂದರಲ್ಲಿ ವಾಸವಾಗಿದ್ದಳು.

ಇತ್ತೀಚೆಗೆ ಇವರ ನಡುವೆ ಕುಡಿದ ಮತ್ತಿನಲ್ಲಿ ಕಲಹವೇರ್ಪಟ್ಟಿದ್ದು, ರಾಮು ಈಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದು ಮೃತದೇಹವನ್ನು ಕಾಡಿನಲ್ಲಿ ಎಸೆದು ಪರಾರಿಯಾಗಿದ್ದ ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ನಿನ್ನೆ ಆತನನ್ನು ಆತನ ಮನೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಂದರ್ಭ ಪರಾರಿಯಾಗಿದ್ದಾನೆ.

-ಚಂದ್ರಮೋಹನ್, ಕೆ.ಕೆ.ಎನ್. ಶೆಟ್ಟಿ.