ನಾಪೋಕ್ಲು, ಅ.28: ಮಳೆಗಾಲದಲ್ಲಿ ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗುವ ಚೆರಿಯಪರಂಬು ಪೈಸಾರಿ ಜಾಗಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆರಿಯಪರಂಬುವಿನ ಪೈಸಾರಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರು ಸಂಕಷ್ಟವನ್ನು ಎದುರಿಸುವಂತಾಗಿದ್ದು, ಈ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಯಥೇಚ್ಛವಾಗಿ ಮರಳು ಸಂಗ್ರಹವಾಗಿರುವದರಿಂದ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುವದರಿಂದ ಪ್ರವಾಹ ತಲೆದೋರಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದೊಳಗೆ ಮರಳನ್ನು ತೆರವುಗೊಳಿಸಿದ್ದಲ್ಲಿ ನೆರೆಹಾನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆಂದು ಅಲ್ಲಿನ ನಿವಾಸಿಗಳು ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಚೆರಿಯಪರಂಬುವಿನಲ್ಲಿ ನದಿದಡದಿಂದ ಸುಮಾರು 300 ಮೀಟರ್ ದೂರದಲ್ಲಿ ಮನೆಗಳಿವೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವದರಿಂದ ಎಷ್ಟು ಪ್ರಮಾಣದ ಮರಳು ಸಂಗ್ರಹವಾಗಿದೆ ಎಂಬದು ಗಣನೆಗೆ ಬರುತ್ತಿಲ್ಲವಾದ್ದರಿಂದ ಮುಂದಿನ ಜನವರಿ ತಿಂಗಳಿನಲ್ಲಿ ಮರಳು ತೆಗೆಯಲು ಟೆಂಡರ್ ಪ್ರಕ್ರಿಯೆ ಸಂದರ್ಭ ಚೆರಿಯಪರಂಬುವಿನ 2ರಿಂದ 3 ಕಿ.ಮೀ, ದೂರದವರೆಗೆ ಮರಳು ತೆಗೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ರೇಷ್ಮಾ, ಮಡಿಕೇರಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ, ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕ ರಾಮಯ್ಯ, ನಾಪೋಕ್ಲು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಗ್ರಾಮ ಲೆಕ್ಕಿಗ ಅಮೃತಾ, ಸಿಬ್ಬಂದಿ ಮತ್ತಿತರರು ಹಾಜರಿದ್ದರು.