ಸೋಮವಾರಪೇಟೆ,ಅ.28: ಜಿ.ಪಂ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಹಾಗೂ ಮೂರು ತಾಲೂಕಿನ ಯುವ ಒಕ್ಕೂಟ ಮತ್ತು ಕಿರಗಂದೂರು ಪ್ರಕೃತಿ ಯುವತಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ, ವೈವಿಧ್ಯಮಯ ಕಲೆಗಳ ಪ್ರದರ್ಶನಕ್ಕೆ ವೇದಿಕೆಯಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು, ಗ್ರಾಮೀಣ ಭಾಗದ ಕಲೆ, ಸಂಸ್ಕøತಿ ಮತ್ತು ಕ್ರೀಡೆಗಳು ಇಂದು ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆಯಿಂದ ಸೊರಗುತ್ತಿವೆ ಎಂದು ವಿಷಾದಿಸಿದರು.

ಗ್ರಾಮೀಣ ಪ್ರತಿಭೆಗಳಿಗೆ ಇಂದು ಅವಕಾಶಗಳು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯುವಜನ ಮೇಳಗಳು ಅವರಿಗೆ ಸಹಕಾರಿಯಾಗುತ್ತದೆ. ಆದರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗಳು ಮಕ್ಕಳ ಹಾಗೂ ಯುವ ಸಮೂಹದ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗುತ್ತಿವೆ. ಸಾಮಾಜಿಕ ಪಿಡುಗುಗಳು, ಮೂಢನಂಬಿಕೆ, ಭ್ರಷ್ಟಾಚಾರವನ್ನು ಸಮಾಜದಿಂದ ತೊಲಗಿಸಲು ಯುವ ಸಮೂಹದಿಂದ ಮಾತ್ರ ಸಾಧ್ಯ ಎಂದರು.

ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಗಣಪತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ರವಿ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಸುರೇಶ್, ತೀರ್ಪುಗಾರರಾದ ಶಂಕರಯ್ಯ, ಪರಮೇಶ್, ಚಂದ್ರಶೇಖರ್, ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ, ತಾಲೂಕು ಘಟಕದ ಕಾರ್ಯದರ್ಶಿ ಬಿ.ಬಿ.ಆದರ್ಶ ಇದ್ದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.

ಯುವಕ ಹಾಗೂ ಯುವತಿಯರಿಗೆ ಜಾನಪದ ನೃತ್ಯ ಸ್ಪರ್ಧೆ, ಜಾನಪದ ಗೀತೆ ಗಾಯನ, ಏಕಾಂಕ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಮ್ ವಾದನ, ಗಿಟಾರ್ ವಾದನ, ಶಾಸ್ತ್ರೀಯ ನೃತ್ಯ, ಆಶುಭಾಷಣ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನಡೆದವು.