ಕುಶಾಲನಗರ, ಅ. 26: ಪ್ರಸಕ್ತ ದಿನಗಳಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಕ್ರೀಡೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿದ್ದು ವಿದ್ಯಾರ್ಥಿಗಳು ಇದರ ಸದವಕಾಶ ಪಡೆದುಕೊಳ್ಳುವಂತಾಗ ಬೇಕೆಂದು ಖ್ಯಾತ ಅಥ್ಲೇಟಿಕ್ ಕ್ರೀಡಾಪಟು ಪದ್ಮಶ್ರೀ ಡಾ.ಪಿ.ಟಿ. ಉಷಾ ಕರೆ ನೀಡಿದರು.ಕುಶಾಲನಗರ ಸಮೀಪದ ನಳಂದ ಗುರುಕುಲ ರೆಸಿಡೆನ್ಸಿಯಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 11ನೇ ವಾರ್ಷಿಕ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಸಾಧನೆಯ ಹಾದಿಯಲ್ಲಿ ಸಾಗುವ ಸಂದರ್ಭ ಸಂಕಷ್ಟಗಳು ಎದುರಾಗುವದು ಸಾಮಾನ್ಯ. ಛಲ ಬಿಡದೆ ಮುನ್ನಡೆದಲ್ಲಿ ಗುರಿ ತಲುಪಲು ಸಾಧ್ಯ ಎಂದರು. ಸತತ ಪರಿಶ್ರಮ ಮೂಲಕ ಯಶಸ್ಸು ಗಳಿಸಬಹುದು. ಕೆಲವು ದಶಕಗಳ ಹಿಂದೆ ಯಾವದೇ ಸವಲತ್ತುಗಳು ಇಲ್ಲದಿದ್ದರೂ ಸ್ವಯಂ ಪ್ರೇರಣೆಯಿಂದ ಪೋಷಕರ ಒತ್ತಾಸೆಯ ನಡುವೆ ಮುನ್ನಡೆದ ಕಾರಣ ತಾನು ಕ್ರೀಡಾ ಕ್ಷೇತ್ರದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದರು. ಶೈಕ್ಷಣಿಕ ಅವಧಿಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಹುಟ್ಟುಹಾಕುವ ವಿಪುಲವಾದ ಅವಕಾಶಗಳು ಲಭಿಸುತ್ತಿದ್ದು ಅದಕ್ಕೆ ಪೂರಕವಾಗಿ ಸರಕಾರಗಳು ನೀಡುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.ಉತ್ತಮ ಕ್ರೀಡಾಪಟುವಾಗ ಬೇಕಾದರೆ ಸತತ ಕಠಿಣ ಪರಿಶ್ರಮ ಅಗತ್ಯ ಎಂದ ಪಿ.ಟಿ.ಉಷಾ, ಯಾವದೇ ಸಾಧನೆ ಮಾಡಬೇಕಾದಲ್ಲಿ ಗುರಿ ಹೊಂದಬೇಕು ಎಂದರು.ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಎಸ್.ಎಲ್.ಎನ್ ಸಾತಪ್ಪನ್ ಮಾತನಾಡಿ,
(ಮೊದಲ ಪುಟದಿಂದ) ತಮ್ಮ ಸಂಸ್ಥೆಯಲ್ಲಿ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ಸಮುದಾಯ ಶಿಕ್ಷಣದೊಂದಿಗೆ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವದಾಗಿ ತಿಳಿಸಿದರು. ವಿದ್ಯಾರ್ಥಿಗಳ ಮನೋವಿಕಾಸ ಮತ್ತು ದೈಹಿಕ ವಿಕಾಸಕ್ಕೆ ಕ್ರೀಡೆ ಉತ್ತಮ ಪ್ರೇರಣೆ ನೀಡುತ್ತದೆ ಎಂದರು.
ಶಾಲೆಯ ರೆಸಿಡೆನ್ಸಿಯಲ್ ಡೈರೆಕ್ಟರ್ ನ್ಯಾಮ್ಗಿಲ್ ಅವರು ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಶಿಕ್ಷಕರ ಪಾಠ ಪ್ರವಚನಗಳ ಪರಿಶ್ರಮ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ದೇವಿ ಪೂಣಚ್ಚ, ವಿದ್ಯಾಸಂಸ್ಥೆಯ ಪ್ರಾಂಶುಪಾಲ ಡಾ. ಅಂತೋನಿ ರಾಜ್, ಕುಶಾಲನಗರದ ಇನ್ನರ್ ವೀಲ್ ಅಧ್ಯಕೆÀ್ಷ ಕವಿತಾ ಸಾತಪ್ಪನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯುನೈಟೆಡ್ ಕಿಂಗ್ಡಂನ ಇಂಗ್ಲಿಷ್ ಸಂವಹನ, ಕೌಶಲ್ಯ ತರಬೇತಿ, ಗೌರವ ಉಪನ್ಯಾಸಕಿ ಹಾಜೀ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಂತರ, ಕೇರಳದ ಸಾಂಪ್ರದಾಯಿಕ ನೃತ್ಯ ನಡೆಯಿತು. ನಂತರ ವಿದ್ಯಾರ್ಥಿಗಳಿಗೆ, ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.
ಕೊಡಗು ಜಿಲ್ಲೆಗೆ ಆಗಮಿಸಿದ ಅಂತರ್ರಾಷ್ಟ್ರೀಯ ಕ್ರೀಡಾಪಟು ಡಾ.ಪಿ.ಟಿ.ಉಷಾ ಅವರನ್ನು ಕುಶಾಲನಗರ ರೋಟರಿ ಇನ್ನರ್ ವೀಲ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲೆ ಸೈನಿಕರ ನೆಲೆ ಬೀಡಾಗಿದ್ದು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಕ್ರೀಡಾಪಟುಗಳನ್ನು ಸೃಷ್ಟಿಸಿದ ನಾಡಾಗಿದೆ ಎಂದು ಖ್ಯಾತ ಕ್ರೀಡಾಪಟು ಪದ್ಮಶ್ರೀ ಡಾ.ಪಿ.ಟಿ. ಉಷಾ ಸಂತಸ ವ್ಯಕ್ತಪಡಿಸಿದರು. ಅವರು ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಸಾಧನೆ ಮಾಡಿರುವದು ಶ್ಲಾಘನೀಯ ಎಂದರಲ್ಲದೆ, ಕೊಡಗು ಜಿಲ್ಲೆಯ ಬಗ್ಗೆ ತನಗೆ ಅಪಾರ ಗೌರವವಿದೆ ಎಂದರು. ಪ್ರಸಕ್ತ ಕೇರಳದ ಕಲ್ಲಿಕೋಟೆಯಲ್ಲಿ 14 ವಯೋಮಾನದ ನಂತರದ ಮಕ್ಕಳಿಗೆ ಅಥ್ಲೆಟಿಕ್ಸ್ನಲ್ಲಿ ಉಚಿತ ತರಬೇತಿ ನೀಡುವ ನಿಟ್ಟಿನಲ್ಲಿ ಸಂಸ್ಥೆಯೊಂದನ್ನು ಹುಟ್ಟು ಹಾಕಿರುವದಾಗಿ ಮಾಹಿತಿ ನೀಡಿದ ಅವರು, ಈ ಮೂಲಕ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಕ್ರೀಡಾಪಟುಗಳ ತಯಾರಿ ನಡೆಸುತ್ತಿರುವದಾಗಿ ತಿಳಿಸಿದರು.
ಕ್ರೀಡಾಪಟುಗಳು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ರೀಡಾಪಟುಗಳು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಕಾಣುವದು ವಿರಳ ಎಂದು ಅಭಿಪ್ರಾಯಿಸಿದರು.