ವೀರಾಜಪೇಟೆ, ಅ. 26: ಮಡಿಕೇರಿಯ ಐತಿಹಾಸಿಕ ಕೋಟೆ ಹಾಗೂ ಅರಮನೆಯ ರಕ್ಷಣೆಗೆ ನಿರ್ದೇಶಿಸಿದ್ದರೂ, ಇದುವರೆಗೆ ಯಾವದೇ ಕ್ರಮ ಕೈಗೊಳ್ಳದಿರುವ ಸರಕಾರಿ ಅಧಿಕಾರಿಗಳಿಗೆ ಪ್ರಾಚೀನ ಕಟ್ಟಡ ರಕ್ಷಿಲು ಯಾವದೇ ಕಾಳಜಿ ಇಲ್ಲವೇ ? ಎಂದು ಉಚ್ಚನಾ ಯಾಲಯ ಪ್ರಶ್ನಿಸಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದೆ ಎಂದು ನಿವೃತ್ತ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ತಿಳಿಸಿದ್ದಾರೆ.ತಾವು ಮಡಿಕೇರಿಯ ಕೋಟೆ ಹಾಗೂ ಅರಮನೆಯ ರಕ್ಷಣೆಗೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ, ಆ ಮೇರೆಗೆ ಕಳೆದ ಆಗಸ್ಟ್ನಲ್ಲಿ ಮಳೆಯಿಂದ ಅರಮನೆ ಹಾನಿಗೊಳ್ಳದಂತೆ ರಕ್ಷಿಸಲು ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾಗಿ ಅವರು ನೆನಪಿಸಿದ್ದಾರೆ.ಆ ಬಳಿಕ ಎರಡು ಬಾರಿ ನ್ಯಾಯಾಲಯವು ಕೊಡಗು ಜಿಲ್ಲಾಡಳಿತ ಹಾಗೂ ಲೋಕೋಪ ಯೋಗಿ ಇಲಾಖೆಗೆ ಈ ಬಗ್ಗೆ ಸೂಚಿಸಿದ್ದರೂ, ಯಾವದೇ ಕ್ರಮ ಜರುಗಿಸದಿರುವ (ಮೊದಲ ಪುಟದಿಂದ) ಅಧಿಕಾರಿಗಳ ವಿರುದ್ಧ ಕ್ರಮದ ಕುರಿತು ನಿನ್ನೆ ನ್ಯಾಯಾಲಯದಲ್ಲಿ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ವಕಾಲತ್ತು ವಹಿಸಿರುವ ವಕೀಲ ಎನ್. ರವೀಂದ್ರ ಕಾಮತ್ ಅವರು, ‘ಶಕ್ತಿ’ಯೊಂದಿಗೆ ನ್ಯಾಯಾಲಯ ವಿಚಾರಣೆ ಕುರಿತು ಮಾಹಿತಿ ನೀಡುತ್ತಾ, ಮಳೆಯಿಂದ ಇನ್ನಷ್ಟು ಹಾನಿಗೀಡಾಗಿರುವ ಕೋಟೆ ಹಾಗೂ ಅರಮನೆಯ ಈಗಿನ ಸ್ಥಿತಿ ಬಗ್ಗೆ ಕೊಡಗು ಜಿಲ್ಲಾಧಿಕಾರಿ, ಲೋಕೋಪಯೋಗಿ ಅಭಿಯಂತರ ಹಾಗೂ ಸರಕಾರದ ಸಂಬಂಧಿಸಿದ ಇಲಾಖೆ ಕಾರ್ಯದರ್ಶಿಯಿಂದ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮಕ್ಕೆ ಕೋರಲಾಗುವದು ಎಂದು ವಿವರಿಸಿದ್ದಾರೆ.
ಈ ಸಂಬಂಧ ತಾ. 31ಕ್ಕೆ ಮರು ವಿಚಾರಣೆ ನಡೆಯಲಿದ್ದು, ಅಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಗೋಕಾಕ್ ಹಾಗೂ ಕೃಷ್ಣಮೂರ್ತಿ ಇವರುಗಳ ಪೀಠಕ್ಕೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾರಣ ಒದಗಿಸಬೇಕಿದೆ ಎಂದು ಅಭಿಪ್ರಾಯ ನೀಡಿದ್ದಾರೆ. ಅಲ್ಲದೆ ದುರಸ್ತಿ ಕೈಗೊಳ್ಳದಿರಲು ಸೂಕ್ತ ವಿವರಣೆಯನ್ನು ಸರಕಾರಿ ವಕೀಲರ ಮುಖಾಂತರ ಒದಗಿಸಬೇಕಿದೆ ಎಂದು ರವೀಂದ್ರ ಕಾಮತ್ ನೆನಪಿಸಿದ್ದಾರೆ.