ಮಡಿಕೇರಿ, ಅ. 26: ಮಡಿಕೇರಿಯ ಹೆಚ್‍ಆರ್‍ಎಸ್ ಕೊಡಗು ರಿಲೀಫ್ ಸೆಲ್ ವತಿಯಿಂದ ಮಹಾಮಳೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ನ. 5 ರಂದು ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಎಂಟು ಅರ್ಹ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುತ್ತದೆ. 2018ರ ಸಾಲಿನಲ್ಲಿ ಸುರಿದ ಮಹಾ ಮಳೆಯಿಂದ ಸಂಭವಿಸಿದ ದುರಂತದಲ್ಲಿ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳನ್ನು ಗುರುತಿಸಿ ಸಂತ್ರಸ್ತರ ಸೇವೆಗಾಗಿ ಜಮಾಅತೆ ಇಸ್ಲಾಮೀ ಹಿಂದ್ ಇದರ ಸೇವಾ ವಿಭಾಗವಾದ ಹ್ಯಮಾನಿಟೇರಿಯನ್ ರಿಲೀಪ್ ಸೊಸ್ಯೆಟಿ ಸಂಸ್ಥೆಯು ಮಡಿಕೇರಿಯಲ್ಲಿ ಕೊಡಗು ರಿಲೀಫ್ ಸೆಲ್ ಕಚೇರಿಯನ್ನು ಸ್ಥಾಪಿಸಿ ಪ್ರಾರಂಭದಲ್ಲಿ ತುರ್ತು ನೆರವು ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿತು.

ಬಾಡಿಗೆ ಮನೆಯಲ್ಲಿದ್ದು, ಸಂತ್ರಸ್ತರಾದ ಹಾಗೂ ಸರಕಾರದ ಪಟ್ಟಿಯಲ್ಲಿಯೂ ಹೆಸರಿಲ್ಲದ ಅರ್ಹ ಕುಟುಂಬಗಳನ್ನು ಗುರುತಿಸಿ ಮಡಿಕೇರಿಯ ತ್ಯಾಗರಾಜ ಕಾಲೋನಿಯ ಕಾರುಣ್ಯ ಬಡಾವಣೆಯಲ್ಲಿ ನಿರ್ಮಿಸಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಅದೇ ರೀತಿ ಈ ವರ್ಷದಲ್ಲಿ ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗಾಗಿ ಸಿದ್ದಾಪುರದ ಎಂ.ಜಿ. ರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಐದು ಮನೆಗಳನ್ನು ಅದೇ ದಿನದಂದು ಹಸ್ತಾಂತರಿಸಲಾಗುತ್ತದೆ ಎಂದು ಸಂಘಟನೆಯ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448300859 ಸಂಪರ್ಕಿಸಬಹುದಾಗಿದೆ.