ಭಾಗಮಂಡಲ, ಅ. 26: ವಿದ್ಯಾರ್ಥಿ ಸಮೂಹ ಜಲಮೂಲಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಸ್ವಚ್ಛ ಕಾವೇರಿ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಅಖಿಲ ಭಾರತೀಯ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ವೇದಾಂತ ಆನಂದ ಸ್ವಾಮೀಜಿ ಕರೆ ನೀಡಿದರು.

ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 9ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರಾ ತಂಡ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡ ನದಿ ಸ್ವಚ್ಛತಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ರಾಯಭಾರಿಗಳಂತೆ ಕೆಲಸ ನಿರ್ವಹಿಸಬೇಕು. ಆ ಮೂಲಕ ಉತ್ತಮ ಪರಿಸರ ಉಳಿಸಲು ಸಾಧ್ಯ ಎಂದರಲ್ಲದೆ ಮನೆಮನೆಯಿಂದ ಸ್ವಚ್ಛತೆ ಪ್ರಾರಂಭಗೊಂಡಲ್ಲಿ ಸ್ವಚ್ಛ ಸಮಾಜ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಜಿಲ್ಲಾಧ್ಯಕ್ಷೆ ಹಾಗೂ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾಪ್ರಕಾಶ್, ಜಲಮೂಲಗಳ ರಕ್ಷಣೆಗೆ ಸರಕಾರದ ಯೋಜನೆಗಳನ್ನು ಕಾಯದೆ ಸ್ವಯಂ ಪಾಲ್ಗೊಂಡು ಜನರಿಗೆ ಅರಿವು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ಶುದ್ಧ ನೀರಿನ ಕೊರತೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಪ್ರಜ್ಞಾ ಮಾತನಾಡಿ, ಸ್ವಚ್ಛತೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ವರ್ಷದ ಎಲ್ಲಾ ದಿನಗಳಲ್ಲಿಯೂ ನಡೆಯಬೇಕು ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿ ಬಾಲ್ಯದಲ್ಲಿಯೇ ಸ್ವಚ್ಛತೆ ಬಗ್ಗೆ ಜ್ಞಾನ ಹೊಂದುವಂತಾಗಬೇಕು ಎಂದರು. ನದಿ, ಜಲಮೂಲಗಳಿಗೆ ಪ್ರತಿದಿನ ಪೂಜೆ ಸಲ್ಲುವಂತಾಗಬೇಕು ಎಂದರು.

ವಾಜಪೇಯಿ ವಸತಿ ಶಾಲೆಯ ಮುಖ್ಯ ಶಿಕ್ಷಕ ಮುತ್ತುರಾಜ್ ಸ್ವಾಗತಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಭರಮಣ್ಣ ಬೆಟ್ಟಗೇರಿ ವಂದಿಸಿದರು.