ಕುಶಾಲನಗರ, ಅ. 26: ಕಾವೇರಿ ಪ್ರವಾಹದಿಂದ ತತ್ತರಿಸಿದ ಕುಶಾಲನಗರ ವ್ಯಾಪ್ತಿಯ ನದಿ ತಟದ ಸಂಪರ್ಕ ರಸ್ತೆಗಳನ್ನು ತಕ್ಷಣ ಅಭಿವೃದ್ಧಿ ಪಡಿಸುವಂತೆ ಕೊಡಗು-ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಅವರು ಕುಶಾಲನಗರ ಸಮೀಪ ಕೊಪ್ಪ, ಆವರ್ತಿ, ಮುತ್ತಿನ ಮುಳ್ಳುಸೋಗೆ ವ್ಯಾಪ್ತಿಯ ಗ್ರಾಮಗಳಿಗೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕ ಕೆ.ಮಹದೇವ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಎರಡು ವರ್ಷಗಳಿಂದ ಕುಶಾಲನಗರ ಮತ್ತು ಕೊಪ್ಪ ವ್ಯಾಪ್ತಿಯ ನದಿ ತಟಗಳ ಹಲವು ಗ್ರಾಮಗಳು, ಸಂಪರ್ಕ ರಸ್ತೆಗಳು ಮುಳುಗಡೆಯಾಗುವ ದರೊಂದಿಗೆ ನೂರಾರು ಮನೆಗಳು ಜಲಾವೃತಗೊಳ್ಳುತ್ತಿರುವ ಹಿನೆÀ್ನಲೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗು ವದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೆ ಕ್ರಿಯಾ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.
ಕೊಪ್ಪ ಟಿಬೇಟಿಯನ್ ಶಿಬಿರಕ್ಕೆ ತೆರಳುವ ಸಂಪರ್ಕ ಸೇತುವೆ ನಿರ್ಮಾಣ, ಆವರ್ತಿ, ಮುತ್ತಿನ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಮುಳುಗಡೆಯಾಗುತ್ತಿರುವ ಸೇತುವೆಗಳ ಪುನರ್ ನಿರ್ಮಾಣ ತಕ್ಷಣ ಮಾಡು ವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾವೇರಿ ನದಿಯ ಎರಡೂ ಭಾಗದ ತಟಗಳ ಸಂರಕ್ಷಣೆ ಮಾಡುವ ದರೊಂದಿಗೆ ನದಿ ನಿರ್ವಹಣೆಗೆ ಕ್ರಮಕೈಗೊಳ್ಳುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ತೋಡೊಂದರ ಬದಿಯಲ್ಲಿ ಗ್ರಾಮದ ತ್ಯಾಜ್ಯಗಳನ್ನು ರಾಶಿ ಹಾಕಿರುವ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಪಿರಿಯಾಪಟ್ಟಣ ತಾಲೂಕು ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.