ಪಾಲಿಬೆಟ್ಟ, ಅ. 26: ಅಭಿವೃದ್ಧಿಯ ಮೂಲಕ ಹೆಸರುವಾಸಿ ಯಾಗಿರುವ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಇದೀಗ ಅಭಿವೃದ್ಧಿ ಕಾಣದೆ ಸಂಕಷ್ಟಕ್ಕೊಳಗಾಗಿದೆ.
ರಾಜ್ಯದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಇದೀಗ ಶಾಶ್ವತ ಅಭಿವೃದ್ಧಿ ಅಧಿಕಾರಿಗಳಿಲ್ಲದೆ ಸಂಕಷ್ಟಕ್ಕೊಳಗಾಗಿದ್ದು, ಸಾರ್ವಜನಿಕರು ಸೇರಿದಂತೆ ಪಂಚಾಯಿತಿ ಆಡಳಿತ ಮಂಡಳಿಯು ಸಂಕಷ್ಟಕ್ಕೊಳಗಾಗಿದೆ.
ಕಳೆದ ಆರು ತಿಂಗಳಿನಿಂದ ಶಾಶ್ವತ ಅಭಿವೃದ್ಧಿ ಅಧಿಕಾರಿ ನೇಮಕವಾಗದೆ ಹೊಸೂರು ಗ್ರಾಮ ಪಂಚಾಯಿತಿಯ ಪಿಡಿಒ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದ್ದರೂ ಸರಿಯಾಗಿ ಪಂಚಾಯಿತಿಗೆ ಭೇಟಿ ನೀಡದೆ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ಪಂಚಾಯಿತಿ ಸದಸ್ಯರುಗಳು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅಭಿವೃದ್ಧಿ ಅಧಿಕಾರಿಗಳಿಲ್ಲದೇ ಸರ್ಕಾರದ ವಿವಿಧ ಯೋಜನೆಗಳು ಸಿಗದೆ ಫಲಾನುಭ ವಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಶುಚಿತ್ವ, ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಯಾವದೇ ಕೆಲಸ ಕಾರ್ಯ ನಡೆಯದೆ ಪಂಚಾಯಿತಿ ಇದೀಗ ಅಭಿವೃದ್ಧಿಯಿಂದ ದೂರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶುಚಿತ್ವ ತ್ಯಾಜ್ಯ ವಿಲೇವಾರಿ ಕಂದಾಯ ವಸೂಲಾತಿ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲಪಿಸುವ ಮೂಲಕ ಜಿಲ್ಲೆ ,ರಾಜ್ಯ ,ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡು ಸಾಧನೆ ಮಾಡಿರುವ ಪಂಚಾಯಿತಿಗೆ ಇದೀಗ ಅಧಿಕಾರಿ ಇಲ್ಲದೆ ಅಭಿವೃದ್ಧಿ ಮರೀಚಿಕೆ ಯಾಗುತ್ತಿದೆ. ದಿನನಿತ್ಯ ಬರುವ ಸಾರ್ವಜನಿಕರಿಗೆ ಯಾವದೇ ಸೌಲಭ್ಯಗಳು ಸಿಗದೇ ಹೇಳುವವರು ಕೇಳುವವರು ಇಲ್ಲದಂತಾಗಿದೆ .
ಸಾಧನೆ ಮೂಲಕ ಹೆಸರು ವಾಸಿಯಾಗಿದ್ದ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ವರ್ಗಾವಣೆ ನಂತರ ಆರು ತಿಂಗಳ ಹಿಂದೆ ಹೊಸೂರು ಗ್ರಾಮ ಪಂಚಾಯಿತಿ ಯಿಂದ ಬಂದ ಪಿಡಿಒ ಅವರಿಂದ ಸರಿಯಾದ ಕೆಲಸವಾಗುತ್ತಿಲ್ಲ ವೆನ್ನಲಾಗಿದೆ.
ಶಾಶ್ವತ ಪಿಡಿಒ ಇಲ್ಲದೆ
ಪಂಚಾಯಿತಿಯ ಕಾರ್ಯ ಕೆಲಸಗಳೆಲ್ಲವೂ ಸ್ಥಗಿತಗೊಂಡಿದೆ. ಶಾಶ್ವತ ಅಭಿವೃದ್ಧಿ ಅಧಿಕಾರಿಯನ್ನು ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ನೇಮಕ ಮಾಡಬೇಕೆಂದು ಒತ್ತಾಯಿಸಿರುವ ಪಂಚಾಯಿತಿ ಆಡಳಿತ ಮಂಡಳಿ ಒತ್ತಾಯಿಸಿದೆ. ತಪ್ಪಿದ್ದಲ್ಲಿ ಬೀಗ ಜಡಿದು ಪ್ರತಿಭಟನೆ ಮಾಡುವದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಎಚ್ಚರಿಸಿದ್ದಾರೆ.
- ಪುತ್ತಂ ಪ್ರದೀಪ್