ಸೋಮವಾರಪೇಟೆ, ಅ. 26: ರೈತರು ಸುಧಾರಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳುವತ್ತ ಗಮನಹರಿಸ ಬೇಕು. ಸಾವಯವ ಕೃಷಿಯೂ ಲಾಭದಾಯಕ ಎಂಬದು ಕೃಷಿಕರಿಗೆ ಮನವರಿಕೆಯಾಗಿದ್ದು, ರೈತರು ಸೂಕ್ತ ಸಲಹೆಗಳನ್ನು ಕೃಷಿ ಇಲಾಖೆಯಿಂದ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಹೇಳಿದರು.

ಕೃಷಿ ಇಲಾಖೆಯ ವತಿಯಿಂದ ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿ ಆಯೋಜಿಸಲಾಗಿದ್ದ ಇಲಾಖೆಗಳ ನಡಿಗೆ ರೈತರ ಮನೆಗೆ- ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಡಿಕೇರಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಬೇಸಾಯ ತಜ್ಞರಾದ ಡಾ.ಬಸವಲಿಂಗಯ್ಯ ಮಾತನಾಡಿ, ಮಣ್ಣಿನ ಜೀವವನ್ನು ರೈತರೇ ಕಾಪಾಡಬೇಕು. ಸಾವಯವ ಪದ್ಧತಿಯಿಂದ ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು. ಕೃಷಿ ಭೂಮಿಗೆ ಎರಡು ಅಥವಾ ಮೂರು ವರ್ಷಗಳಿಗೆ ಒಮ್ಮೆಯಾದರೂ ಸಾವಯವ ಗೊಬ್ಬರವನ್ನು ಹಾಕಬೇಕು ಎಂದು ಸಲಹೆ ನೀಡಿದರು.

ತಜ್ಞರು ಶಿಫಾರಸ್ಸು ಮಾಡಿದ ಶಿಲೀಂಧ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಭತ್ತದ ಬೀಜೋಪಚಾರ ಮಾಡುವದರಿಂದ ಬೀಜಗಳಿಂದ ಹರಡುವ ಅನೇಕ ರೋಗಗಳನ್ನು ಕಡಿಮೆ ಖರ್ಚಿನಲ್ಲಿ ಹತೋಟಿಗೆ ತರಬಹುದು. ರೋಗ ರಹಿತ ಬೆಳೆಯಿಂದ ಅಧಿಕ ಇಳುವರಿಯನ್ನು ಪಡೆಯಬಹುದು ಎಂದರು.

ಮಡಿಕೇರಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕಿ ವಿದ್ಯಾಶ್ರೀ ಅವರು, ಕೈತೋಟ, ಅಡಿಕೆ, ಕಾಳುಮೆಣಸು ಬೆಳೆಗಳಿಗೆ ಬಾಧಿಸುವ ರೋಗ ಹಾಗೂ ಹತೋಟಿ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಅತಿ ಹೆಚ್ಚಿನ ರೈತರು ಕಾಳುಮೆಣಸು ಬೆಳೆಯುತ್ತಿದ್ದು, ಕಾಳುಮೆಣಸು ಬಳ್ಳಿಗಳಿಗೆ ತಗಲುವ ಸೊರಗುರೋಗದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕು. ಮಳೆಗಾಲಕ್ಕೆ ಮೊದಲು ರೋಗಪೀಡಿತ ಬಳ್ಳಿಗಳನ್ನು ಕಿತ್ತು ನಾಶಪಡಿಸಬೇಕು. ಬಳ್ಳಿಗಳ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಚರಂಡಿಗಳನ್ನು ನಿರ್ಮಿಸಿಕೊಳ್ಳಬೇಕು. ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು. ರೋಗನಿರೋಧಕ ಶಕ್ತಿ ಇರುವ ಮಿಶ್ರ ತಳಿಗಳನ್ನು ನೆಡಬೇಕು. ರೈತರು ಸಾಮೂಹಿಕವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಚೆಟ್ಟಳ್ಳಿ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ವೆಂಕಟರಮಣಪ್ಪ, ಹಣ್ಣುಗಳನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಿ, ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ಬಟರ್ ಫ್ರೂಟ್, ಕಾಮಾಕ್ಷಿ ಹಣ್ಣುಗಳಲ್ಲಿ ಔಷಧಿಯ ಗುಣಗಳಿದ್ದು, ಹಣ್ಣುಗಳಿಗೆ ಬೇಡಿಕೆಯಿದೆ. ಕಸಿ ಮಾಡಿದ ಹಣ್ಣಿನ ಗಿಡಗಳು ಚೆಟ್ಟಳ್ಳಿ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿದ್ದು, ಖರೀದಿಸಬಹುದು ಎಂದು ತಿಳಿಸಿದರು.

ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ಲಕ್ಷ್ಮೀಕಾಂತ್ ಮಾಹಿತಿ ನೀಡಿ, ಭಾರತದಲ್ಲಿ ಅತ್ಯುತ್ತಮ ಕಾಫಿಯನ್ನು ಬೆಳೆಯ ಲಾಗುತ್ತಿದೆ. ಗುಣಮಟ್ಟದ ಕಾಫಿ ಉತ್ಪಾದನೆಯತ್ತ ಗಮನಹರಿಸಬೇಕು. ಕಾಫಿ ಗಿಡಗಳನ್ನು ಬಾಧಿಸುವ ರೋಗ ನಿಯಂತ್ರಣದ ಬಗ್ಗೆ ಬೆಳೆಗಾರರು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತೋಳೂರುಶೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ವಿ.ಜೆ. ಭಾರತಿ, ಬೆಟ್ಟದಳ್ಳಿ ಗ್ರಾ.ಪಂ. ಅಧ್ಯಕ್ಷೆ ಹೆಚ್.ಆರ್. ಪವಿತ್ರ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯ ಬಿ.ಎ. ಧರ್ಮಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ತಾಕೇರಿ ಪೊನ್ನಪ್ಪ, ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ಆರ್.ಎಂ.ಸಿ. ಸದಸ್ಯ ಸಿ.ಎಸ್. ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.