ಕೂಡಿಗೆ, ಅ. 26: ಹೆಬ್ಬಾಲೆಯ ಕುಡಿಯುವ ನೀರು ಯೋಜನೆಯ ಘಟಕವು ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ 12 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆಯಾಗಿದೆ. ಈ ಯೋಜನೆಯು ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಾತ್ರ ನೀರು ಸರಬರಾಜಾಗುತ್ತಿದೆ. ಕಾವೇರಿ ನದಿ ನೀರಿನ ಹೆಚ್ಚಳದಿಂದಾಗಿ ಹೆಬ್ಬಾಲೆಯ ಸೇತುವೆಯ ಬಳಿ ನಿರ್ಮಿಸಿರುವ ನೀರೆತ್ತುವ ಯಂತ್ರ ಹಾನಿಯಾಗಿದ್ದು, ನೀರನ್ನು ಎತ್ತಲು ಸಾಧ್ಯವಾಗದೆ, ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಅತಿಯಾದ ಮಳೆಯಿಂದ ಕಾವೇರಿ ಹಾಗೂ ಹಾರಂಗಿ ನದಿ ನೀರಿನ ಹೆಚ್ಚಳದಿಂದಾಗಿ ನೀರೆತ್ತುವ ಯಂತ್ರ ಘಟಕ ಮುಳುಗಿದ್ದ ಪರಿಣಾಮ ಹಾಗೂ ಅತಿಯಾದ ಮಣ್ಣು ಯಂತ್ರದೊಳಗೆ ಸೇರಿಕೊಂಡಿದ್ದು, ಕಳೆದ ಎರಡು ತಿಂಗಳಿನಿಂದ ಯಂತ್ರ ಹಾನಿಯಾಗಿದೆ. ಇದನ್ನು ಗಮನಿಸಿದ ಕುಡಿಯುವ ನೀರಿನ ಯೋಜನೆಯ ಇಂಜಿನಿಯರ್‍ಗಳು, ಶುದ್ಧೀಕರಣ ಘಟಕದಲ್ಲಿ ಹಾಗೂ ಪೈಪ್‍ಗಳಲ್ಲಿ ಸಮಸ್ಯೆಯಾಗಿರಬಹುದು ಎಂದು ಪರಿಶೀಲಿಸಿದಾಗ ಅವುಗಳಲ್ಲಿ ಯಾವದೇ ತೊಂದರೆ ಕಂಡುಬಂದಿಲ್ಲ. ಬದಲಾಗಿ ಹೊಳೆಯ ದಡದಲ್ಲಿ ನಿರ್ಮಿಸಿರುವ ನೀರೆತ್ತುವ ಯಂತ್ರದ ಘಟಕದಲ್ಲಿ ತೊಂದರೆಯಾಗಿರುವದು ಕಂಡುಬಂದಿದೆ. ಇದೀಗ ಈ ಯೋಜನೆಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೆ ನೀರೊದಗಿಸುವ ಉದ್ದೇಶದಿಂದ ಜಾಕ್ವೇಲ್ ಘಟಕದಲ್ಲಿ ಯಂತ್ರಗಳ ಬದಲಾವಣೆಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.