ಸಿದ್ದಾಪುರ, ಅ. 26: ನೆಲ್ಲಿಹುದಿಕೇರಿ ದಾರುಸ್ಸಲಾಂ ಮದರಸ ವಿದ್ಯಾರ್ಥಿ ಸಂಘಟನೆ ಎಸ್‍ಕೆಎಸ್‍ಬಿವಿ ವತಿಯಿಂದ ತಾ. 27 ರಂದು ನೆಲ್ಲಿಹುದಿಕೇರಿ ದಾರುಸ್ಸಲಾಂ ಮದರಸ ಸಭಾಂಗಣದಲ್ಲಿ ಜೀವ ರಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಎಸ್‍ಕೆಎಸ್‍ಬಿವಿ ಸಿದ್ದಾಪುರ ವಲಯ ಸದಸ್ಯ ಬಿ.ಆರ್. ರಾಝಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾ ಮಳೆಗೆ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ವ್ಯಾಪ್ತಿಯ ಹಲವು ಮನೆಗಳು ನೀರಿನಲ್ಲಿ ಮುಳುಗಡೆಯಾಗಿ, ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾಗ ಗ್ರಾಮದ ಯುವಕರು ತಮ್ಮ ಪ್ರಾಣದ ಹಂಗು ತೊರೆದು ನೀರಿಗೆ ಇಳಿದು ಹಲವರ ಜೀವ ಉಳಿಸಿದ್ದಾರೆ. ಅಂತಹವರನ್ನು ಗುರುತಿಸಿ ಗೌರವ ಸೂಚಿಸುವ ಸಲುವಾಗಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಿದ್ದಾಪುರ ಪಿಎಸೈ ದಯಾನಂದ, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ, ನೆಲ್ಲಿಹುದಿಕೇರಿ ಪಿಡಿಓ ಅನಿಲ್‍ಕುಮಾರ್, ಹೊಸ್ಕೇರಿ ಪಿಡಿಓ ಅಬ್ದುಲ್ಲ, ಸಿದ್ದಾಪುರ ಪಿಡಿಓ ವಿಶ್ವನಾಥ್, ನೆಲ್ಲಿಹುದಿಕೇರಿ ಜಮಾಅತ್ ಅಧ್ಯಕ್ಷ ಒ.ಎಂ. ಅಬ್ದುಲ್ಲ ಹಾಜಿ, ಸೋಮವಾರಪೇಟೆ ಎಡಿಎಲ್‍ಆರ್ ಷಂಶುದ್ದೀನ್, ವಕ್ಫ್ ಬೋರ್ಡ್ ಚೇರ್ಮಾನ್ ಯಾಕೂಬ್ ಬಜೆಗುಂಡಿ, ಪ್ರಮುಖರಾದ ವಿ.ಕೆ. ಲೋಕೇಶ್, ಪಿ.ಆರ್. ಭರತ್, ಎ.ಕೆ. ಹಕೀಂ, ಸಹಾಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಕೆ.ಎಂ. ಬಶೀರ್ ಹಾಗೂ ನಸೀರ್ ಹಾಜಿ ಆಗಮಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಎಸ್‍ಕೆಎಸ್‍ಬಿವಿ ನೆಲ್ಲಿಹುದಿಕೇರಿ ರೇಂಜ್ ಅಧ್ಯಕ್ಷ ಕೆ.ಎನ್. ನಾಸಿಫ್, ಕಾರ್ಯದರ್ಶಿ ಇರ್ಫಾನ್, ಉಪಾಧ್ಯಕ್ಷ ಟಿ.ಕೆ. ಸಲ್ಮಾನ್, ಸದಸ್ಯ ವೈ.ಎಂ. ಸಹಲ್ ಇದ್ದರು.