ಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳು ಭತ್ತದ ಬೆಳೆಯನ್ನು ತಿಂದು ಹಾನಿಗೊಳಿಸಿವೆ. ಇದರಿಂದ ರೈತರಿಗೆ ಅಪಾರ ನಷ್ಟವುಂಟಾಗಿದ್ದು, ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಸೀಗೆಹೊಸೂರಿಗೆ ರಂಗಪ್ಪ, ಜವರೇಗೌಡ, ಜಯಣ್ಣ ಎಂಬವರ ಜಮೀನಿಗೆ ಬಾಣವಾರ ಕಾಡಂಚಿನಿಂದ ಸೀಗೆಹೊಸೂರಿನಲ್ಲಿ ತೋಡಿರುವ ಕಂದಕವನ್ನು ದಾಟಿ, ಸೋಲಾರ್ ತಂತಿಯನ್ನು ತುಳಿದು ಬರುತ್ತಿರುವ ಕಾಡಾನೆಗಳು ದಾಳಿ ನಡೆಸಿ ಭತ್ತದ ಬೆಳೆಯನ್ನು ತುಳಿದು, ತಿಂದು ಹಾನಿಗೊಳಿಸಿವೆ. ಅಲ್ಲದೆ, ಸೀಗೆಹೊಸೂರು ಯಲಕನೂರು ವ್ಯಾಪ್ತಿಯಲ್ಲಿ ಸಂಜೆ ಆರು ಗಂಟೆಯಾಗುತ್ತಿದ್ದಂತೆ ಕಾಡಾನೆಗಳು ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆ ಸ್ಥಳ ಪರಿಶೀಲಿಸಿ, ಕಾಡಾನೆಗಳ ಉಪಟಳವನ್ನು ನಿಯಂತ್ರಿಸಲು ಮುಂದಾಗಬೇಕು ಹಾಗೂ ಕಾಡಾನೆಗಳಿಂದ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.