ಕುಶಾಲನಗರ, ಅ. 25: ಕುಶಾಲನಗರದ ಶ್ರೀ ವೆಂಕಟರಮಣ ಕ್ರೆಡಿಟ್ ಸಹಕಾರ ಸಂಘದ ಶಾಖೆಯಲ್ಲಿ ಇ-ಸ್ಟಾಂಪಿಂಗ್ ಸೇವೆಯನ್ನು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿವಿಧ ರೀತಿಯ ದಾಖಲಾತಿಗಳಿಗೆ ಛಾಪಾ ಕಾಗದದ ಅವಶ್ಯಕತೆ ಹೆಚ್ಚಿನ ಮಟ್ಟದಲ್ಲಿದೆ. ಇಂತಹ ಸೇವೆಯನ್ನು ಗ್ರಾಹಕರಿಗೆ ಒದಗಿಸುವಲ್ಲಿ ಸಂಘವು ಚಿಂತನೆ ಹರಿಸಿರುವದು ಶ್ಲಾಘನೀಯ ವಿಚಾರ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಮಾತನಾಡಿ, ಸಂಘವು ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗದೆ, ಪ್ರತಿಯೊಬ್ಬರಿಗೆ ಸೇವೆ ನೀಡುವ ಗುರಿ ಹೊಂದಿರುವದು ಉತ್ತಮ ಸಂಗತಿ. ಸಮಾಜಮುಖಿ ಕಾರ್ಯಗಳ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪ್ರತಿ ಸಮುದಾಯ ತನ್ನದೇ ಆದ ಕೊಡುಗೆ ನೀಡಬೇಕಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ಸಹಕಾರವಾಗಲಿ ಎಂಬ ಏಕೈಕ ಉದ್ದೇಶದಿಂದ ಲಾಭದಾಯಕವಲ್ಲದ ಇ-ಸ್ಟಾಂಪಿಂಗ್ ಸೇವೆಯನ್ನು ಆರಂಭಿಸಿ ರುವದು ಈ ಸಂಸ್ಥೆಯ ಜನಪರ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಸಂಘದ ಅಧ್ಯಕ್ಷರಾದ ಕೆ.ಸಿ. ನಾರಾಯಣಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪಿ.ಕೆ. ಮುರಳೀಧರ್, ಸಂಘದ ಉಪಾಧ್ಯಕ್ಷ ಪಿ.ಎಸ್. ಗಂಗಾಧರ್, ನಿರ್ದೇಶಕರುಗಳಾದ ಪಿ.ಸಿ. ಜಯರಾಂ, ನಿತ್ಯಾನಂದ ಮುಂಡೋಡಿ, ಸದಾನಂದ ಜಾಕೆ, ಕೆ.ಸಿ. ಸದಾನಂದ, ದಿನೇಶ್ ಮಡಪ್ಪಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್, ಶಾಖಾ ವ್ಯವಸ್ಥಾಪಕ ಧೀರಜ್ ಚರಣ್, ಪ್ರಮುಖರಾದ ಕೆ.ಪಿ. ಪ್ರಸನ್ನ, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್ ಮತ್ತಿತರರು ಇದ್ದರು.