ಕುಶಾಲನಗರ, ಅ. 25: ಕಾವೇರಿ ತಾಲೂಕು ವ್ಯಾಪ್ತಿಯ ನೂತನ ರೈತ ಸಂಘ ರಚನೆ ಸಂಬಂಧ ಸಮಾಲೋಚನಾ ಸಭೆ ಕುಶಾಲನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಯಿತು.

ಕುಶಾಲನಗರ ನೂತನ ತಾಲೂಕಾಗಿ ಘೋಷಣೆಯಾಗಿದ್ದು ಸುಂಟಿಕೊಪ್ಪ ಹೋಬಳಿಯಿಂದ ಗಡಿ ಗ್ರಾಮದ ಶಿರಂಗಾಲದವರೆಗೆ ನೂತನ ತಾಲೂಕು ವ್ಯಾಪ್ತಿಯಲ್ಲಿ ರೈತರನ್ನು ಸಂಘಟಿಸಿ ರೈತರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದು ಹಕ್ಕನ್ನು ಪ್ರತಿಪಾದಿಸುವ ಸಂಬಂಧ ಸಮಾನ ಮನಸ್ಕರ ರೈತರು ಒಗ್ಗೂಡಿ ಚರ್ಚೆ ನಡೆಸುವದರೊಂದಿಗೆ ನೂತನ ಸಮಿತಿ ರಚನೆಗೆ ಮುಂದಾದರು.

ಈ ಸಂದರ್ಭ ಗೌರವ ಸಲಹೆಗಾರರಾಗಿ ಸಭೆಯಲ್ಲಿ ಪಾಲ್ಗೊಂಡ ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ರೈತರನ್ನು ಉದ್ದೇಶಿಸಿ ಮಾತನಾಡಿದರು. ರೈತರು ಹಲವಾರು ರೀತಿಯ ಸಮಸ್ಯೆಗಳಿಂದ ನೊಂದಿದ್ದಾರೆ. ಕಾಡಾನೆ-ಮಾನವ ಸಂಘರ್ಷ, ದಲ್ಲಾಳಿಗಳ ಹಾವಳಿ, ಬೆಂಬಲ ಬೆಲೆ ಮತ್ತು ಸೂಕ್ತ ಮಾರುಕಟ್ಟೆ ಕೊರತೆಯಿಂದ ನಲುಗಿದ್ದಾರೆ. ಇತ್ತ ರೈತರ ಅನುಕೂಲಕ್ಕೆ ನಿರ್ಮಾಣಗೊಂಡ ಹಾರಂಗಿ ಜಲಾಶಯದಿಂದ ಬೆಳೆಗಳಿಗೆ ಸಮರ್ಪಕ ರೀತಿಯಲ್ಲಿ ನೀರು ಲಭ್ಯವಾಗುತ್ತಿಲ್ಲ. ಇದರೊಂದಿಗೆ ವಿವಿಧ ಇಲಾಖೆಗಳಿಂದ ರೈತರಿಗೆ ಅನಾನುಕೂಲ ಎದುರಾಗುತ್ತಿದೆ. ಈ ಎಲ್ಲಾ ಸವಾಲು, ಸಂಘರ್ಷಗಳಿಗೆ ಚಳುವಳಿ ಮತ್ತು ಹೋರಾಟಗಳ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅದಕ್ಕೆ ಸಮರ್ಪಕ ನಾಯಕತ್ವದ ಅವಶ್ಯಕತೆಯಿದೆ ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಾಸನದ ಆನೆಕೆರೆ ರವಿ ಮಾತನಾಡಿ, ಕೊಡಗು ಜಿಲ್ಲೆಯ ರೈತರು ಪ್ರಕೃತಿ ವಿಕೋಪದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವದು ವಿಷಾದಕರ ಸಂಗತಿ. ಸಂಕಷ್ಟವನ್ನು ಮೆಟ್ಟಿ ನಿಲ್ಲಲು ಸಂಘಟನೆ ಸಹಕಾರಿಯಾಗಲಿದೆ. ಜಾತ್ಯತೀತ, ರಾಜಕೀಯ ರಹಿತವಾದ ಸಂಘಟನೆಯ ಅವಶ್ಯಕತೆಯಿದೆ ಎಂದರು.

ಸಭೆಯಲ್ಲಿ ಆಲೂರು, ಸಕಲೇಶಪುರ ರೈತ ಸಂಘದ ಅಧ್ಯಕ್ಷ ತಿಮ್ಮೇಗೌಡ, ಹಾಸನ ಜಿಲ್ಲಾ ಸಂಘದ ಅಧ್ಯಕ್ಷ ಬಾಬು, ಉಪಾಧ್ಯಕ್ಷ ಮೀಸೆ ಮಂಜಣ್ಣ, ರೈತ ಮುಖಂಡರಾದ ಟಿ.ಕೆ. ಪಾಂಡುರಂಗ, ಎಸ್.ಆರ್. ಶಿಶುಪಾಲ ಮತ್ತು ನೂತನ ಸಮಿತಿಯ ಉಪಾಧ್ಯಕ್ಷ ಟಿ.ವಿ. ರಮೇಶ್, ಕಾರ್ಯದರ್ಶಿಗಳಾದ ಶಿವಪ್ರಸಾದ್ ಮತ್ತು ವಿವಿಧೆಡೆಗಳ ರೈತ ಮುಖಂಡರು ಭಾಗವಹಿಸಿದ್ದರು.