ವೀರಾಜಪೇಟೆ, ಅ. 25: ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕು ಶಾಖೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ. 1ರಂದು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಮೂಹಿಕ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಟಿ.ವಿ. ಅನಿಲ್‍ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ಅಂದು ಪೂರ್ವಾಹ್ನ 9 ಗಂಟೆಗೆ ಗೋಣಿಕೊಪ್ಪಲು ರಸ್ತೆಯಲ್ಲಿರುವ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್ ಧ್ವಜಾರೋಹಣ ಮಾಡಲಿದ್ದಾರೆ. 9.30 ಗಂಟೆಗೆ ಮಾರಿಯಮ್ಮ ದೇವಾಲಯದಿಂದ ಸಾರ್ವಜನಿಕ ಆಸ್ಪತ್ರೆಯವರೆಗೆ ಸ್ವಚ್ಛತೆಯ ಶ್ರಮದಾನ ಮಾಡಲಾಗುವದು. ಸಾರ್ವಜನಿಕ ಆಸ್ಪತ್ರೆಯಲ್ಲಿ 10.30 ರಿಂದ 2 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಶಿಬಿರವನ್ನು ಡಿವ್ಯೆಎಸ್‍ಪಿ ವಿಜಯಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ದುರ್ಗಾಪ್ರಸಾದ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಸಾರ್ವಜನಿಕ ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ, ಜಿಲ್ಲಾಧ್ಯಕ್ಷ ಜಗದೀಶ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಘಟನೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ ಕೊಡಗು ಕೇರಳ ಗಡಿ ಪ್ರದೇಶವಾಗಿರುವ ವೀರಾಜಪೇಟೆ ತಾಲೂಕಿನ ಇತರ ಪ್ರಮುಖ ಕೇಂದ್ರಗಳಲ್ಲಿ ವರ್ತಕರು, ಇತರ ಸಂಘ ಸಂಸ್ಥೆಗಳು ಬಳಸುವ ನಾಮಫಲಕದಲ್ಲಿ ಶೇಕಡ 60ರಷ್ಟು ಭಾಗ ಕನ್ನಡ ಭಾಷೆಯನ್ನು ಬಳಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಟಿ.ವಿ ಸಂತೋಷ್, ಕಾರ್ಯದರ್ಶಿ ಅವಿನಾಶ್ ರವೀಂದ್ರ, ಖಜಾಂಚಿ ತಬರೇಶ್ ಉಪಸ್ಥಿತರಿದ್ದರು.