ಮಡಿಕೇರಿ, ಅ. 24: ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು ಇಂದು ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳ ಕಡೆಯ ಸಭೆಯನ್ನು ಕೋಟೆ ಹಳೆಯ ವಿಧಾನ ಸಭಾಂಗಣದಲ್ಲಿ ನಡೆಸಿದರು. ಆ ಬೆನ್ನಲ್ಲೇ ನಗರದ ಕೆ. ಬಾಡಗದಲ್ಲಿ ಸರ್ವೆ ನಂ. 12/6ರಲ್ಲಿ ವಿಶಾಲ ಐದು ಎಕರೆ ಪ್ರದೇಶದಲ್ಲಿ ರೂ. 30.42 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಜಿ.ಪಂ. ಭವನಕ್ಕೆ ಸ್ಥಳಾಂತರಗೊಳ್ಳಲು ತಯಾರಿ ನಡೆಸಿದರು.ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಾ. 25 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ನೂತನ ಜಿ.ಪಂ. ಆಡಳಿತ ಭವನವನ್ನು ಲೋಕಾರ್ಪಣೆಗೊಳಿಸುವ ಸಂಬಂಧ ಅವರು ಪೂರ್ವಸಿದ್ಧತೆ ಕುರಿತಾಗಿ ಇತರ ಅಧಿಕಾರಿಗಳೊಂದಿಗೆ ಸಮಾ ಲೋಚಿಸಿದರು. ಆಡಳಿತಭವನ ಉದ್ಘಾಟನೆ ಮತ್ತು ಕಾರ್ಯಕ್ರಮ ಅಚ್ಚುಕಟ್ಟುಗೊಳಿಸುವ ದಿಸೆಯಲ್ಲಿ ಕೆಳಹಂತದ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.
ನೂತನ ಭವನ: ನೂತನ ಜಿಲ್ಲಾ ಪಂಚಾಯತ್ ಸಂಕೀರ್ಣವು ಮೊದಲ ಹಂತದ ಕಾಮಗಾರಿಯ ತಳಹಂತದಲ್ಲಿ ಸುಮಾರು 16 ಕಾರುಗಳ ನಿಲುಗಡೆಯೊಂದಿಗೆ ಉಪಹಾರ ಕೇಂದ್ರ ಇನ್ನಿತರ ಮೂಲಭೂತ ಸೌಕರ್ಯದಿಂದ ಕೂಡಿದೆ. ಮಾತ್ರವಲ್ಲದೆ ನೆಲ ಮಹಡಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕೊಠಡಿ, ಉಪಾಧ್ಯಕ್ಷರ ಕೊಠಡಿ, ಒಂದು ವಿಧಾನ ಸಭಾ ಸದಸ್ಯರ ಕೊಠಡಿ (ಮಡಿಕೇರಿ ಕ್ಷೇತ್ರದ ಶಾಸಕರು) ಇಬ್ಬರು ಮೇಲ್ಮನೆ ಸದಸ್ಯರ ಕಚೇರಿ ಹಾಗೂ ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷರುಗಳ 3 ಕಚೇರಿಗಳು ಸಿದ್ಧಗೊಂಡಿವೆ.
ವಿಶಾಲ ಸಭಾಂಗಣ: ಅಲ್ಲದೆ ಮೊದಲನೆ ಅಂತಸ್ತಿನಲ್ಲಿ ಸುಮಾರು 200 ಮಂದಿ ಕುಳಿತು ಸಭೆ ನಡೆಸಬಹುದಾದ ಸುಸಜ್ಜಿತ ಸಭಾಂಗಣ ದೊಂದಿಗೆ, ವಿವಿಧ ಎಂಟು ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳು ನಿರ್ಮಾಣ ಗೊಂಡಿವೆ. ಮುಖ್ಯವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಎಸ್‍ಸಿ ಮತ್ತು ಎಸ್‍ಟಿ, ಕಾರ್ಪೋರೇಷನ್, ಸಮಾಜ ಕಲ್ಯಾಣ, ಕೃಷಿ, ಅಕ್ಷರ ದಾಸೋಹ, ರೇಷ್ಮೆ, ಪಶುವೈದ್ಯಕೀಯ, ಐಟಿಡಿಪಿ, ಪಿಆರ್‍ಇಡಿ, ಇಇ ಮತ್ತು ಎಇಇ ಕಚೇರಿ ಗಳನ್ನು ನಿರ್ಮಿಸಿದ್ದಾಗಿದೆ.
(ಮೊದಲ ಪುಟದಿಂದ)
ಎರಡನೆ ಅಂತಸ್ತು: ಎರಡನೆಯ ಅಂತಸ್ತಿನಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಸಹಿತ, ಜಿಲ್ಲಾ ಪಂಚಾಯಿತಿಯ ಇತರ ಎಲ್ಲ ಕೊಠಡಿಗಳಿವೆ. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ರೂಪಿಸಿರುವ ನೂತನ ಜಿ.ಪಂ. ಭವನವು 6781.09 ಚದರ ಮೀಟರ್‍ನೊಂದಿಗೆ, ಮೊದಲ ಹಂತದಲ್ಲಿ ರೂ. 21.92 ಕೋಟಿ, ಎರಡನೆಯ ಹಂತದಲ್ಲಿ ರೂ. 8.50 ಕೋಟಿ ಹಾಗೂ ಒಟ್ಟಾರೆ ರೂ. 30.42 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ನೂತನ ಕಟ್ಟಡವು ಲಿಫ್ಟ್, ಜನರೇಟರ್, ಪೀಠೋಪಕರಣಗಳು, ವಿದ್ಯುತ್ ಇತ್ಯಾದಿ ಆಧುನಿಕ ಸೌಲಭ್ಯದೊಂದಿಗೆ ರಸ್ತೆ, ನೀರು, ತಡೆಗೋಡೆ ಇನ್ನಿತರ ವ್ಯವಸ್ಥೆಯಿಂದ ಕೂಡಿದ್ದು, ಕೊಡಗು ಜಿ.ಪಂ. ಆಡಳಿತದೊಂದಿಗೆ ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ಹೊಸತನಕ್ಕೆ ಅನುವು ಮಾಡಿಕೊಡುವಂತಿದೆ.
ಇಂದಿನ ಸಮಾರಂಭ: ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಪೂರ್ವ ತಯಾರಿ: ಈಗಾಗಲೇ ನೂತನ ಜಿ.ಪಂ. ಭವನದಲ್ಲಿ ಈ ಸಂಜೆ ತಳಿರು ತೋರಣಗಳೊಂದಿಗೆ ವಿದ್ಯುತ್ ದೀಪಾಲಂಕಾರ, ಸ್ವಾಗತ ಕಮಾನುಗಳ ನಡುವೆ ಹೊರಗೆ ಶಾಮಿಯಾನ, ಸಭಾಕಾರ್ಯಕ್ರಮ, ಲಘು ಉಪಹಾರ, ಕಾಫಿ-ಚಹಾ ಕೌಂಟರ್‍ಗಳು ರೂಪುಗೊಂಡಿವೆ.
ವಿಜಯ ವಿನಾಯಕ ದೇವಾಲಯದ ಅರ್ಚಕ ಶ್ರೀಕೃಷ್ಣ ಉಪಾದ್ಯಾಯ ಅವರ ನೇತೃತ್ವದಲ್ಲಿ ಪೂಜೆ ಹವನ ನಡೆಯಿತು.
ಈ ಸಂದರ್ಭ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಿ.ಇ.ಓ. ಲಕ್ಷ್ಮಿಪ್ರೀಯ, ಸದಸ್ಯರುಗಳಾದ ಟಿ.ಕೆ. ಬೋಪಣ್ಣ, ಕಿರಣ್ ಕಾರ್ಯಪ್ಪ, ಕೆ.ಪಿ. ಚಂದ್ರಕಲಾ, ಕುಮುದ ಧರ್ಮಪ್ಪ, ಸುನಿತಾ, ಪೂರ್ಣಿಮಾ ಗೋಪಾಲ್ ಮೊದಲಾದವರು ಇದ್ದರು.
ಪರಿಶೀಲನೆ: ಜಿ.ಪಂ. ಭವನ ಲೋಕಾರ್ಪಣೆ ಸಂಬಂಧ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಸದಸ್ಯರ ಬಳಗ, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ತಂಡ ಖುದ್ದು ಪರಿಶೀಲನೆಯೊಂದಿಗೆ ಕಾರ್ಯಕ್ರಮದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯ ನಡುವೆ ತಾ. 25ರ ಸಮಾರಂಭಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿರುವ ದೃಶ್ಯ ಗೋಚರಿಸಿದೆ.