ಕಣಿವೆ, ಅ. 24: ರಾಜ್ಯವಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧ ವಾಗಿರುವ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ಅತಿಥಿಯಾಗಿ ಇದೀಗ ಹೊಸದಾಗಿ ಮತ್ತೊಂದು ಆನೆ ಆಗಮನವಾಗಿದೆ. ಪ್ರಸಕ್ತ ದುಬಾರೆ ಸಾಕಾನೆ ಶಿಬಿರದಲ್ಲಿ 27 ಸಾಕಾನೆಗಳಿದ್ದು, ಪಳಗಿಸುತ್ತಿರುವ 2 ಕಾಡಾನೆಗಳು ಸೇರಿ 29 ಆನೆಗಳಿದ್ದು, ಅವುಗಳ ಸಾಲಿಗೆ 30 ನೇ ಅತಿಥಿ ಆನೆಯಾಗಿ ಮತ್ತೊಂದು ಬಂಡೀಪುರ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಬಂಧಿಸಲ್ಪಟ್ಟ ಕಾಡಾನೆಯೊಂದನ್ನು ಪಳಗಿಸಲು ದುಬಾರೆ ಶಿಬಿರಕ್ಕೆ ತರಲಾಗಿದೆ. ಈ ಕಾಡಾನೆಗೆ ಕಾಲರ್ ಅಳವಡಿಸಲಾಗಿದೆ. ಹೊಸದಾಗಿ ಧಾವಿಸಿರುವ ಈ ಕಾಡಾನೆ 18 ರಿಂದ 24ರ ವಯೋಮಾನದ ಗಂಡಾನೆಯಾಗಿದ್ದು, ಅದರ ಒಂದು ದಂತ ನೀಳವಾಗಿದ್ದು ಒಂದಷ್ಟು ಬಾಗಿದಂತಿದೆ. ಮತ್ತೊಂದು ದಂತ ಕಾಡಾನೆಗಳ ಕಾದಾಟದಿಂದ ಒಂದಷ್ಟು ಭಾಗ ತುಂಡರಿಸಿದೆ. ಮೂಲತಃ ತಮಿಳುನಾಡು ಅರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡು ಬಂಡಿಪುರ ಅರಣ್ಯಕ್ಕೆ ಧಾವಿಸಿದ ಈ ಕಾಡಾನೆ, ಅರಣ್ಯದಂಚಿನ ಗ್ರಾಮಗಳಿಗೆ ಲಗ್ಗೆಯಿಟ್ಟು ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತಿದ್ದ ಕಾರಣದಿಂದ ರೈತರ ಕೋಪ - ತಾಪ, ಆವೇಶ - ಆಕ್ರೋಶಕ್ಕೆ ಮಣಿದ ಅಲ್ಲಿನ ಅರಣ್ಯಾಧಿಕಾರಿಗಳು ಪುಂಡಾಟ ನಡೆಸುತ್ತಿದ್ದ ಕಾಡಾನೆಯನ್ನು ಹಿಡಿದು ಇಲ್ಲಿಗೆ ತರಲಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಕಳೆದ ಮೂರು ತಿಂಗಳ ಹಿಂದೆ ಸುಂಟಿಕೊಪ್ಪದ ಮೋದೂರಿ ನಿಂದ ಹಿಡಿದು ತಂದ ಪುಂಡಾನೆ ಯನ್ನು ಶಿಬಿರದಲ್ಲಿ ಅಳವಡಿಸಿದ ಭದ್ರವಾದ ಮರದ ಬೃಹತ್ ಕ್ರಾಲ್‍ನೊಳಗೆ ಕೂಡಿಟ್ಟು ಮಾವುತರು ಪಳಗಿಸುತ್ತಿದ್ದಾರೆ.

(ಮೊದಲ ಪುಟದಿಂದ) ಹದಿನೈದು ಇಪ್ಪತ್ತು ದಿನಗಳಲ್ಲಿ ಸಾಕಾನೆಗಳ ಜೊತೆ ಸೇರುವಷ್ಟರ ಮಟ್ಟಿಗೆ ಪಳಗಿಸಲಾಗಿದೆ. ಹಾಗೆಯೇ ಹಾಸನದಿಂದ ಒಂದೂವರೆ ತಿಂಗಳ ಹಿಂದಷ್ಟೆ ಹಿಡಿದು ತಂದಿರುವ ಮತ್ತೊಂದು ಪುಂಡಾನೆಯ ಪಂಜರದ ಬಳಿಯೇ ಹೊಸದಾದ ಮತ್ತೊಂದು ಕ್ರಾಲ್‍ನ್ನು ಮಾವುತರು ಸಿದ್ಧಗೊಳಿಸಿದ್ದು ಅದರೊಳಗೆ ಬಂಡಿಪುರದಿಂದ ತಂದ ಆನೆಯನ್ನು ಪಳಗಿಸಲಾಗುತ್ತದೆ ಎಂದು ಕೊಡಗು ವಲಯ ಅರಣ್ಯಾಧಿಕಾರಿ ಪ್ರಭಾಕರ್ ತಿಳಿಸಿದ್ದಾರೆ. ಶಿಬಿರದಲ್ಲಿ ಹೊಸದಾಗಿ ಬಂದಿರುವ ಹಾಸನದ ಕಾಡಾನೆಯನ್ನು ಮಾವುತ ಶರತ್, ಕಾವಾಡಿ ಪಾಪು ಆರೈಕೆ ಮಾಡುತ್ತಿದ್ದಾರೆ. ಮೋದೂರಿನಿಂದ ತಂದ ಕಾಡಾನೆಯನ್ನು ಮಾವುತ ಹುರುಣೆ ಹಾಗೂ ಕಾವಾಡಿ ಗಿರೀಶ್ ನೋಡಿಕೊಳ್ಳುತ್ತಿದ್ದಾರೆ. ಇದೇ ಶಿಬಿರದಲ್ಲಿನ ಕಾರ್ತಿಕ್ ಎಂಬ ಆನೆ ಶಿಬಿರದಲ್ಲಿನ ಅಣ್ಣು ಹಾಗೂ ಮಣಿಯ ಎಂಬವರನ್ನು ತುಳಿದು ಸಾಯಿಸಿತ್ತು. ಮೂವರು ಮಂದಿ ಗಾಯಗೊಂಡಿದ್ದರು. ಕ್ರಮೇಣ ಕಾರ್ತಿಶ್ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. -ಕೆ.ಎಸ್.ಮೂರ್ತಿ