ಮಡಿಕೇರಿ, ಅ. 24: ಬೆಂಗಳೂರು ಹೊರವಲಯದ ನಾಗಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಅಸರುವಳ್ಳಿ ಎಂಬಲ್ಲಿನ ಕೋಳಿ ಫಾರಂಗೆ ನುಗ್ಗಿ, ಮಾಲೀಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ, ನಗದು ರೂ. 1.50 ಲಕ್ಷ ದೋಚಿದ್ದ ಏಳು ಮಂದಿ ದರೋಡೆಕೋರರ ಪೈಕಿ ಕೊಡಗಿನ ಮೂವರ ಸಹಿತ ಹಾಸನದ ಆರೋಪಿಯೊಬ್ಬನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.ತಾ. 10 ರಂದು ಅಸರುಹಳ್ಳಿ ಯಲ್ಲಿರುವ ಕೋಳಿ ಫಾರಂಗೆ ದಾಳಿ ನಡೆಸಿರುವ ದುಷ್ಕರ್ಮಿಗಳು, ಮಾಲೀಕ ಅಬಿಬುಲ್ಲಾ ಮೇಲೆ ಹಲ್ಲೆ ಮಾಡಿದಲ್ಲದೆ ಚೂರಿಯಿಂದ ಗಾಯಗೊಳಿಸಿ ನಗದು ದೋಚಿಕೊಂಡು ಪರಾರಿಯಾಗಿ ದ್ದಾರೆ. ಅಲ್ಲದೆ ಇದೇ ವೇಳೆ ಟಾಟಾಏಸ್ ವಾಹನವೊಂದನ್ನು ಕಳ್ಳತನ ಮಾಡಿದ್ದಾರೆ.ಮಾತ್ರವಲ್ಲದೆ ದುಷ್ಕøತ್ಯಕ್ಕೆ ಇನ್ನೋವಾ ಕಾರೊಂದನ್ನು ಬಳಸಿ ಕೊಂಡು ಕುಣಿಗಲ್ ಮಾರ್ಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ಕೋಳಿ ಫಾರಂ ಮಾಲೀಕನಿಂದ ದೂರು ಪಡೆದ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಮಾರ್ಗದರ್ಶನದಲ್ಲಿ ತ್ಯಾಮಗೊಂಡ್ಲು ಠಾಣಾಧಿಕಾರಿ ಕೃಷ್ಣಕುಮಾರ್ ಮತ್ತು ಸಿಬ್ಬಂದಿ ಬಿರುಸಿನ ಮಾಹಿತಿ ಕಲೆ ಹಾಕಲಾಗಿ, ದರೋಡೆ ನಡೆದಿದ್ದ ಕೋಳಿ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ, ನಾಪೋಕ್ಲು ಸಮೀಪದ ಚೆರಿಯಪರಂಬು ನಿವಾಸಿ ಕೆ.ಪಿ. ಸಯ್ಯದ್ ಉಮ್ಮರ್ ಪುತ್ರ ಶಾನಿದ್ (29) ಎಂಬಾತ ಕೆಲವು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿರುವದು ಖಾತರಿಯಾಗಿದೆ.

(ಮೊದಲ ಪುಟದಿಂದ) ಈತನ ಜಾಡು ಹಿಡಿದಾಗ ದುಷ್ಕøತ್ಯದ ಈ ಸೂತ್ರದಾರಿಯೊಂದಿಗೆ, ಮೂರ್ನಾಡುವಿನ ಹಸೈನಾರ್ ಎಂಬವರ ಪುತ್ರ ಎ.ಹೆಚ್. ಫಿರೋಜ್ (25), ನಾಪೋಕ್ಲುವಿನ ಮಹಮ್ಮದ್ ಎಂಬವರ ಪುತ್ರ ಸಿರಾಜುದ್ದೀನ್ (26) ಹಾಗೂ ಹೊಳೆನರಸೀಪುದ ಸಯ್ಯದ್ ಬಿಲಾಲ್ (22) ಸೇರಿದಂತೆ ಇತರ ಮೂವರ ತಂಡ ದರೋಡೆಗೈದಿರುವ ಮಾಹಿತಿ ಲಭಿಸಿದೆ.

ಆ ಮೇರೆಗೆ ವ್ಯಾಪಕ ಶೋಧ ಮುಂದುವರೆಸಿದಾಗ, ನಾಲ್ವರು ಆರೋಪಿಗಳು ನೆಲಮಂಗಲದಿಂದ ಕುಣಿಗಲ್ ಮಾರ್ಗವಾಗಿ ತೆರಳುವ ಹಾದಿಯಲ್ಲಿ ಸೆರೆ ಸಿಕ್ಕಿದ್ದಾರೆ. ಈ ವೇಳೆ ಮೇಲ್ಕಾಣಿಸಿದ ಕೊಡಗು ಮೂಲದ ಮೂವರು ಹಾಗೂ ಹಾಸನದ ವ್ಯಕ್ತಿ ಸೆರೆಯಾಗಿದ್ದು, ಇತರ ಮೂವರು ಪರಾರಿಯಾಗಿದ್ದಾಗಿ ತ್ಯಾಮಗೊಂಡ್ಲು ಠಾಣಾಧಿಕಾರಿ ಕೃಷ್ಣಕುಮಾರ್ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.

ಈ ನಾಲ್ವರನ್ನು ನೆಲಮಂಗಲ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಆ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹ ವಶಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.