ಗೋಣಿಕೊಪ್ಪಲು, ಅ. 23: ಮನೆಯ ಹಿಂಭಾಗದಲ್ಲಿ ಕೈ, ಕಾಲು ತೊಳೆಯಲು ಹೋದ ಸಂದರ್ಭ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಯೊಂದು ಹಠಾತ್ ಬಿದ್ದ ಪರಿಣಾಮ ಮನೆಯ ಒಡತಿ ಕಮಲ (52) ಅವರಿಗೆ ಗಂಭೀರ ಗಾಯವಾಗಿದೆ. ಈಕೆಯನ್ನು ರಕ್ಷಿಸುವ ಪ್ರಯತ್ನ ನಡೆಸಿದ ಸಮೀಪದ ಮಹಿಳೆ ಚೌಡಮ್ಮ (72) ಅವರಿಗೂ ವಿದ್ಯುತ್ ತಗುಲಿದ್ದು, ಇವರಿಬ್ಬರೂ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನಲೆ : ಕಮಲ ಎಂದಿನಂತೆ ದೈನಂದಿನ ಕೆಲಸ ಮುಗಿಸಿ ಮನೆಗೆ ಬಂದು ಕೈ, ಕಾಲು, ತೊಳೆಯಲು ಮನೆಯ ಹಿಂಭಾಗಲಿನ ಮೂಲಕ ಹೊರ ತೆರಳಿದ್ದಾರೆ. ಈ ಸಂದರ್ಭ ಮನೆಯ ಮೇಲ್ಭಾಗದಿಂದ ಹಾದು ಹೋಗುವ ವಿದ್ಯುತ್ ತಂತಿ ತುಂಡಾಗಿ ಕಮಲ ಅವರ ಬೆನ್ನಿನ ಮೇಲೆ ಬಿದ್ದಿದೆ. ಇದರಿಂದ ಬಚಾವಾಗುವ ಪ್ರಯತ್ನ ನಡೆಸಿದರಾದರೂ ಕಮಲ ಅವರ ಕಾಲಿಗೆ ತಂತಿ ಸುತ್ತಿಕೊಂಡಿದೆ. ಗಾಬರಿಗೊಂಡ ಅವರು ಒಂದೇ ಸಮನೆ ಕೂಗಿ ಕೊಂಡಾಗ ಮನೆಯಲ್ಲಿದ್ದ ಚೌಡಮ್ಮ ಎಂಬ ಮಹಿಳೆ ಬಂದು ಕೋಲಿನಿಂದ ತಂತಿಯನ್ನು ಬಿಡಿಸುವ ಪ್ರಯತ್ನ ಮಾಡಿದ್ದು, ಆ ಸಂದರ್ಭದಲ್ಲಿ ಚೌಡಮ್ಮ ಅವರಿಗೂ ವಿದ್ಯುತ್ ಶಾಕ್ ತಗುಲಿದೆ. ಅಷ್ಟೊತ್ತಿಗಾಗಲೇ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಕಡಿತಗೊಳಿಸಿ ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ ಚೆಸ್ಕಾಂ ಅಧಿಕಾರಿಗಳು ಹಾಜರಿದ್ದು ಮಹಿಳೆಯರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು.
ಇಲಾಖೆಯ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
- ಹೆಚ್.ಕೆ.ಜಗದೀಶ್