ಮಡಿಕೇರಿ, ಅ. 22: ಅರಣ್ಯ ಇಲಾಖೆ ವತಿಯಿಂದ ಹಸಿರು ಕರ್ನಾಟಕ ಅಭಿಯಾನದ ಪ್ರಯುಕ್ತ ‘ಅರಣ್ಯ ಉಳಿಸಿ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಿಂದ ಪರಿಸರ ಜಾಥಾಕ್ಕೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮ್ಕುಮಾರ್ ಅವರು ಮಂಗಳವಾರ ಚಾಲನೆ ನೀಡಿದರು.
ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ಗಳ ಆಶ್ರಯದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಅರಣ್ಯ, ವನ್ಯ ಜೀವಿಗಳು ಮತ್ತು ಪರಿಸರ ಸಂರಕ್ಷಣೆಯ ಕುರಿತ ಭಿತ್ತಿ ಪತ್ರಗಳನ್ನು ಹಿಡಿದು ಜನರಿಗೆ ಪರಿಸರದ ಕುರಿತು ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಯಿರಿ, ಬೈಸಿಕಲ್ ಬಳಸಿ ಇಂಧನ ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ಉಸಿರು ಜಲವೇ ಜೀವಜಲ, ಅರಣ್ಯ ಮರ್ದನ, ಮಾನವ ರೋದನ ಎಂಬ ಘೋಷಣೆಯ ಮೂಲಕ ಜಾಗೃತಿ ಮೂಡಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಿ ಬೆಳೆಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸಬಾರದು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್ ತ್ಯಜಿಸಬೇಕು. ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಬಟ್ಟೆ ಕೈಚೀಲ ಬಳಸುವಂತಾಗಬೇಕು ಎಂದು ಹೇಳಿದರು.
ಪರಿಸರ ಅಧಿಕಾರಿ ಗಣೇಶನ್ ಅವರು ಮಾತನಾಡಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಬಹುದು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಂಬಿ ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಪರಿಸರದ ಕುರಿತ ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಟಿ.ಜಿ. ಪ್ರೇಮ್ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದರು.
ಹಸಿರು ಕರ್ನಾಟಕ ಆಂದೋಲ ನದ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿ ದರು. ಸಾಮೂಹಿಕವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಸಾರ್ವ ಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಮೂಹಿಕ ಗಿಡ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸೋಮವಾರ ಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ, ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಸತೀಶ್, ಜಾನಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಗಾಯತ್ರಿ, ಮತ್ತಿತರರು ಪಾಲ್ಗೊಂಡಿ ದ್ದರು. ಟಿ.ಜಿ. ಪ್ರೇಮ್ಕುಮಾರ್ ಸ್ವಾಗತಿಸಿ, ವಂದಿಸಿದರು.