ಮಡಿಕೇರಿ, ಅ. 22: ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಸಂಸ್ಥೆ ವತಿಯಿಂದ ಕರ್ನಾಟಕ ಸಬ್ ಜೂನಿಯರ್ 17 ವಯೋಮಿತಿ ಬಾಲಕರ ಹಾಗೂ 21 ವಯೋಮಿತಿ ಬಾಲಕಿಯರ ತಂಡಗಳಿಗೆ ತಾ. 27 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. 2020 ಜನವರಿ 10 ರಿಂದ 22ರ ವರೆಗೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆಯಲಿರುವ 3ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್‍ಗೆ ಕರ್ನಾಟಕ ತಂಡಗಳನ್ನು ಆಯ್ಕೆ ಮಾಡಲಾಗುತ್ತಿದೆ.

17 ವಯೋಮಿತಿ ಬಾಲಕರ ತಂಡಕ್ಕೆ 2003 ಜನವರಿ ಒಂದರ ನಂತರ ಜನಿಸಿರಬೇಕು ಹಾಗೂ 56 ಕೆ.ಜಿ. ಮೀರಿರಬಾರದು. 21 ವಯೋಮಿತಿ ಬಾಲಕಿಯರ ತಂಡಕ್ಕೆ 1999ರ ಜನವರಿ ಒಂದರ ನಂತರ ಜನಿಸಿರಬೇಕು ಹಾಗೂ 70 ಕೆ.ಜಿ. ಮೀರಿರಬಾರದು.

ಆಸಕ್ತ ಕ್ರೀಡಾಪಟುಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಗತ್ಯ ದಾಖಲೆಯೊಂದಿಗೆ ಹಾಗೂ ಸಮವಸ್ತ್ರದೊಂದಿಗೆ ಹಾಜರಿರಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಬಿ.ಡಿ. ಕಪಿಲ್ ಕುಮಾರ್ ತಿಳಿಸಿದ್ದಾರೆ.