ಮಡಿಕೇರಿ, ಅ. 22: ಮಳೆ ಸಂಕಷ್ಟದ ನಡುವೆಯೂ ಸ್ಥಳೀಯ ಸಂಸ್ಥೆಗಳ ಮೂಲಕ ಸರಕಾರ ದುಬಾರಿ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಜಾತ್ಯತೀತ ಜನತದಳದ ಮಹಿಳಾ ಘಟಕ, ಸಂತ್ರಸ್ತರನ್ನು ಕಡೆಗಣಿಸುತ್ತಿರುವ ಸರಕಾರದ ವಿರುದ್ಧ ತಾ. 25 ರಂದು ಮಡಿಕೇರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಜೆಡಿಎಸ್ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಮಹಾಮಳೆಯ ಪ್ರವಾಹದಿಂದ ಕಂಗೆಟ್ಟಿರುವ ಕೊಡಗಿನ ಸಂತ್ರಸ್ತರು ದುಬಾರಿ ತೆರಿಗೆ ಪದ್ಧತಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾ.ಪಂ, ಪಟ್ಟಣ ಪಂಚಾಯತ್ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ದುಬಾರಿ ತೆರಿಗೆಯನ್ನು ಸಂಗ್ರಹಿ ಸುತ್ತಿರುವ ಸರಕಾರ ಮಳೆಹಾನಿ ಸಂತ್ರಸ್ತರ ನೋವಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಾಗಿ ವಿಫಲವಾಗಿದೆ ಎಂದು ಟೀಕಿಸಿದರು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳಾ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಿ ಸರಕಾರದ ಧೋರಣೆಯನ್ನು ಖಂಡಿಸುವದಾಗಿ ಶಾಂತಿ ಅಚ್ಚಪ್ಪ ತಿಳಿಸಿದರು.

ಈ ಬಾರಿ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಅನೇಕ ಮಂದಿ ಮನೆ, ಆಸ್ತಿ, ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷ ಮಹಾಮಳೆಯಿಂದ ಅನಾಹುತ ಸಂಭವಿಸಿದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ಮನೆ ಕಳೆದುಕೊಂಡ ವರಿಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿ ಕೊಡಲು ಯೋಜನೆ ರೂಪಿಸಿದರು. ಅಲ್ಲದೆ ನಿರಾಶ್ರಿತರಿಗೆ ಬಾಡಿಗೆ ಮನೆಗಾಗಿ ತಲಾ 10 ಸಾವಿರ ರೂ.ಗಳನ್ನು ನೀಡುತ್ತಾ ಬರಲಾಗುತ್ತಿತ್ತು. ಆದರೆ ಈಗಿನ ಸರಕಾರ ಸಂತ್ರಸ್ತರ ಸೌಲಭ್ಯಗಳನ್ನು ಮೊಟಕುಗೊಳಿಸುತ್ತಾ ಬರುತ್ತಿದ್ದು, ಮನೆ ಬಾಡಿಗೆ ಹಣ ನೀಡುವದನ್ನು ಸ್ಥಗಿತಗೊಳಿಸಿದೆ. ಅಲ್ಲದೆ ನೂತನ ಮನೆಗಳ ನಿರ್ಮಾಣಕ್ಕೆ ಕೇವಲ ತಲಾ 5 ಲಕ್ಷ ರೂ. ನೀಡುವದಾಗಿ ಹೇಳಿದೆ. ಇದು ರಾಜ್ಯ ಸರ್ಕಾರ ಸಂತ್ರಸ್ತರನ್ನು ಕಡೆಗಣಿಸುತ್ತಿರು ವದಕ್ಕೆ ಉತ್ತಮ ಉದಾಹರಣೆ ಯಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯ ವಾಗಿದೆ ಎಂದರು.

ಕೊಡಗಿನ ಜನ ಮಳೆಹಾನಿ ಯಿಂದ ಸಂಕಷ್ಟದಲ್ಲಿರು ವಾಗಲೇ ದುಬಾರಿ ತೆರಿಗೆ ವಿಧಿಸಿ ಮತ್ತಷ್ಟು ಆರ್ಥಿಕ ಒತ್ತಡವನ್ನು ಹೇರಲಾಗುತ್ತಿದೆ ಎಂದು ಶಾಂತಿ ಅಚ್ಚಪ್ಪ ಆರೋಪಿಸಿದರು. ನೆಲ್ಯಹುದಿಕೇರಿಯಲ್ಲಿ ಸ್ಥಾಪಿಸಿರುವ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಜೆಡಿಎಸ್ ವಿರೋಧಿಸುವದಾಗಿ ತಿಳಿಸಿದರು.

ಜೆಡಿಎಸ್ ಎಸ್‍ಸಿ, ಎಸ್ಟಿ ಘಟಕದ ಜಿಲ್ಲಾ ಮಹಿಳಾ ಅಧ್ಯಕ್ಷೆ ಹೆಚ್.ವಿ.ಜಯ ಮಾತನಾಡಿ, ಈ ಹಿಂದಿನ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರೈತರ ಮತ್ತು ಬಡವರ ಸಾಲಮನ್ನಾ ಮಾಡಿ ಜನಪರ ಸರ್ಕಾರ ಎಂದು ಹೆಸರು ಗಳಿಸಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸು ತ್ತಿದೆ ಎಂದು ಆರೋಪಿಸಿ ದರು. ಸಾಲ ಮನ್ನಾ ಪ್ರಕ್ರಿಯೆಯನ್ನು ಮುಂದುವರೆಸ ಬೇಕೆಂದು ಅವರು ಒತ್ತಾಯಿಸಿದರು.

ಪೊನ್ನಂಪೇಟೆ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ನಿರೀಕ್ಷೆಗಳು ಹುಸಿಯಾಗಿದ್ದು, ಸಂತ್ರಸ್ತರು ತಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪೊನ್ನಂಪೇಟೆ ಹೋಬಳಿ ಅಧ್ಯಕ್ಷೆ ಹೆಚ್.ಎನ್. ಮಂಜುಳಾ ನಾಗು, ಮಡಿಕೇರಿ ನಗರಾಧ್ಯಕ್ಷೆ ಸುನಂದ ಹಾಗೂ ಪ್ರಧಾನ ಕಾರ್ಯದರ್ಶಿ ಜೆಸ್ಸಿಂತಾ ಶ್ರೀಧರ್ ಉಪಸ್ಥಿತರಿದ್ದರು.