ಗೋಣಿಕೊಪ್ಪ ವರದಿ, ಅ. 22: ಕರ್ನಾಟಕ ಋಣಮುಕ್ತ ವಿಧೇಯಕ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ ಮುಗಿದಿದೆ ಎಂಬ ಗೊಂದಲದಿಂದ ನೂರಾರು ಸಾರ್ವಜನಿಕರು ಮಡಿಕೇರಿ ಉಪ ವಿಭಾಗ ಅಧಿಕಾರಿಗಳ ಕಚೇರಿಯಿಂದ ನಿರಾಸೆಯಿಂದ ಹಿಂತಿರುಗಿದ ಘಟನೆ ನಡೆಯಿತು.

ತಾ. 22 ರಂದು ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ ಎಂದು ಜಿಲ್ಲಾ ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಸೂಚನೆಯಂತೆ ಮಂಗಳವಾರ ನೂರಾರು ಸಾರ್ವಜನಿಕರು ಆಗಮಿಸಿದ್ದರಾದರೂ, ಅರ್ಜಿ ಸ್ವೀಕರಿಸದ ಕಾರಣ ನಿರಾಸೆ ಅನುಭವಿಸಿದರು. ತಾ. 22 ರಂದು ಕೊನೆಯ ದಿನಾಂಕ ಎಂದು ಫಲಕ ಹಾಕಲಾಗಿತ್ತು. ಇದರಿಂದ ಅರ್ಜಿ ತಂದಿದ್ದೇವೆ. ಆದರೆ, ಈಗ ತಾ. 20 ಕ್ಕೆ ಮುಗಿದಿದೆ ಎಂದು ಸೂಚನೆಯನ್ನು ನಮ್ಮ ಮುಂದೆಯೇ ಅಂಟಿಸಿರುವದು ಗೊಂದಲಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ನೋವು ಹಂಚಿಕೊಂಡರು.

ಸೂಚಿಸಿದ್ದ ಫಲಕದಲ್ಲಿ ತಾ. 22 ಎಂದು ನಮೂದಿಸಲಾಗಿತ್ತು. ಇದನ್ನು ದಾಖಲೆಯಾಗಿಟ್ಟುಕೊಂಡು ಸಾರ್ವಜನಿಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದÀರ್ಭ ಉಪ ವಿಭಾಗಾಧಿಕಾರಿ ಜವರೇಗೌಡ ಅವರು ತಾ. 20 ಕೊನೆಯ ದಿನಾಂಕವಿರುವ ಸೂಚನಾ ಫಲಕವನ್ನು ಜನರ ಎದುರೇ ಗೋಡೆಗೆ ಅಂಟಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು. ಇದರಿಂದ ಕೋಪಗೊಂಡ ಅರ್ಜಿದಾರರು ಅಧಿಕಾರಿಯನ್ನು ಪ್ರಶ್ನಿಸಿದರು. ಬೇರೆ ಜಿಲ್ಲೆಗಳಲ್ಲಿ ಇಂದು ಕೂಡ ಅರ್ಜಿ ಸ್ವೀಕರಿಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಾತ್ರ ಗೊಂದಲದಿಂದ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಎ.ಸಿ. ಜವರೇಗೌಡ ಅವರು 90 ದಿನದಲ್ಲಿ ಅರ್ಜಿ ಸ್ವೀಕಾರಕ್ಕೆ ನಿಗದಿಪಡಿಸಿದಂತೆ ಕ್ರಮಕೈಗೊಳ್ಳಲಾಗಿದೆ. ತಾ. 20 ರಂದು ಕೊನೆಯ ದಿನಾಂಕವಾಗಿತ್ತು. ಇದರಿಂದ ಇಂದು ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಇದಕ್ಕೆ ಕೋಪಗೊಂಡ ಸಾರ್ವಜನಿಕರು, ಸೂಚನೆಯಂತೆ ನಾವು ಬಂದಿದ್ದೇವೆ. ನಿಮ್ಮ ಗೊಂದಲದಿಂದ ನಾವು ಸರ್ಕಾರದ ಯೋಜನೆಯಿಂದ ವಂಚಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿ ನಿರ್ಗಮಿಸಿದರು.