ಮಡಿಕೇರಿ, ಅ. 22: ಸ್ವಾತಂತ್ರ್ಯೋತ್ತರದ ವರ್ಷಗಳಲ್ಲಿ ಇದುವರೆಗೂ ಮಡಿಕೇರಿಯ ಐತಿಹಾಸಿಕ ಕೋಟೆಯ ಅರಮನೆ ಯೊಳಗೆ ಕಾರ್ಯ ನಿರ್ವಹಿಸುತ್ತಿದ್ದ ವಿವಿಧ ಇಲಾಖೆಗಳ ಕಚೇರಿಗಳು ಖಾಲಿಯಾಗುತ್ತಿವೆ. ಈ ದಿಸೆಯಲ್ಲಿ ಇದೇ ತಾ. 31ರೊಳಗೆ ಜಿ.ಪಂ. ಆಡಳಿತ ಕಚೇರಿಗಳು ಸಂಪೂರ್ಣ ಸ್ಥಳಾಂತರಕ್ಕೆ ತಯಾರಿ ನಡೆದಿದೆ. ಆ ಸಲುವಾಗಿಯೇ ಜಿ.ಪಂ. ಕಚೇರಿಯ ಬೇರೆ ಬೇರೆ ವಿಭಾಗಗಳ ಸಿಬ್ಬಂದಿ ತಮ್ಮ ತಮ್ಮ ದೈನಂದಿನ ಕಡತಗಳೊಂದಿಗೆ ಅಮೂಲ್ಯ ದಾಖಲೆಗಳನ್ನು ಗಂಟುಮೂಟೆ ಕಟ್ಟಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಅಣಿಗೊಳಿಸುತ್ತಿದ್ದಾರೆ.ಈಗಾಗಲೇ ಅರಮನೆ ಪರಿಸರದಲ್ಲಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಕಚೇರಿ, ಜಿಲ್ಲಾ ಸ್ಕೌಟ್ ಭವನ, ಹಳೆಯ ಜೈಲು (ಬಾಲಕಿಯರ ಬಾಲ ಮಂದಿರ), ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಗಳ ಕೀಲಿಕೈಗಳನ್ನು ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಗೊಳಿಸಿರುವದಾಗಿ ತಿಳಿದು ಬಂದಿದೆ.

ಇನ್ನುಳಿದಂತೆ ಕೊಡಗು ಜಿ.ಪಂ.ನ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ಕಾರ್ಯದರ್ಶಿಗಳು, ಯೋಜನಾ ಇಲಾಖೆ, ಲೆಕ್ಕಪತ್ರ ವಿಭಾಗ, ಆಡಳಿತ ವಿಭಾಗ, ಸ್ವಚ್ಛ ಭಾರತಾ ವಿಭಾಗ ಸೇರಿದಂತೆ ಎಲ್ಲಾ ಕಚೇರಿಗಳು ನೂತನ ಜಿ.ಪಂ. ಆಡಳಿತ ಭವನಕ್ಕೆ ತಾ. 31 ರೊಳಗೆ ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ.

ಅಲ್ಲದೆ, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸದ್ಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಟ್ಟಡದೆಡೆಗೆ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದೆ.

ಖಜಾನೆ ಗುಜರಿಗೆ : ಇನ್ನೊಂದೆಡೆ ಅನೇಕ ವರ್ಷಗಳಿಂದ ಅರಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಖಜಾನೆ ಈಗಾಗಲೇ ಜಿಲ್ಲಾ ಆಡಳಿತ ಭವನಕ್ಕೆ ಸ್ಥಳಾಂತರಗೊಂಡಿದೆ. ಪರಿಣಾಮ ಅಲ್ಲಿದ್ದ ಹಳೆಯ ಕಬ್ಬಿಣದ ಖಜಾನೆ ಸಹಿತ ಇತರೆಲ್ಲ ನಿರುಪಯುಕ್ತ ಪೀಠೋಪಕರಣ ಇತ್ಯಾದಿ ಗುಜರಿ ಪಾಲಾಯಿತು.

ಕಂದಾಯ ಕಚೇರಿ : ಅಂತೆಯೇ ಈ ಹಿಂದಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಸಕ್ತ ಕಾರ್ಯನಿರ್ವ ಹಿಸುತ್ತಿರುವ

(ಮೊದಲ ಪುಟದಿಂದ) ಮಡಿಕೇರಿ ಗ್ರಾಮೀಣ ಕಂದಾಯ ನಿರೀಕ್ಷಕರುಗಳ ಕಚೇರಿಗಳನ್ನು ಕೂಡ ತಾ. 31ಕ್ಕೆ ಸ್ಥಳಾಂತರಿಸಲಿದ್ದು, ನಿಖರವಾಗಿ ಸ್ಥಳ ಗೊತ್ತಾಗಿಲ್ಲ ಎಂದು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಕಾಲಾವಕಾಶ ಕೋರಿಕೆ : ಇನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯ ಇತ್ಯಾದಿಗಳನ್ನು ಕೆಲವು ಸಮಯ ಇರುವಲ್ಲೇ ಮುಂದುವರೆಸಲು, ಜಿಲ್ಲಾಡಳಿತದ ಮುಖಾಂತರ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಕಾಲಾವಕಾಶ ಕೋರಿರುವದಾಗಿ ಆಯಾ ಮುಖ್ಯಸ್ಥರಿಂದ ಮಾಹಿತಿ ಲಭಿಸಿದೆ. ಮುಂದಿನ ವರ್ಷದ ಮಳೆಗಾಲಕ್ಕೆ ಮುನ್ನ ಎಲ್ಲವೂ ಕೋಟೆ ಪರಿಸರದಿಂದ ಸ್ಥಳಾಂತರ ಆಗಲಿದೆ ಎಂದು ಈ ಮೂಲಗಳಿಂದ ತಿಳಿದು ಬಂದಿದೆ.