ಮಡಿಕೇರಿ , ಅ. 22 : ಮೈಸೂರಿನಿಂದ ಕುಶಾಲನಗರದವರೆಗೆ ರೈಲು ಮಾರ್ಗಕ್ಕೆ ಇತ್ತೀಚೆಗಷ್ಟ್ಟೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸ್ಪಂದನ ದೊರಕಿದೆ. ಕೊಡಗು ವನ್ಯ ಜೀವಿ ಸಂಘದ ಮಾಜಿ ಅಧ್ಯಕ್ಷ ಪರಿಸರವಾದಿ ಗೋಣಿಕೊಪ್ಪಲುವಿನ ನಿವೃತ್ತ ಕರ್ನಲ್ ಚೆಪ್ಪುಡಿರ ಪಿ. ಮುತ್ತಣ್ಣ ಅವರು ಸಲ್ಲಿಸಿದ್ದ ಅರ್ಜಿ ಕುರಿತಾಗಿ ವಾದ-ವಿವಾದ ನಡೆದು ನ್ಯಾಯಾಲಯವು ಈ ಮೊಕದ್ದಮೆಯನ್ನು ಇಂದು ಮುಕ್ತಾಯಗೊಳಿಸಿದೆ.ಕೇಂದ್ರ ರೈಲ್ವೇ ಇಲಾಖೆ ಹಾಗೂ ರಾಜ್ಯ ಸರ್ಕಾರದ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯವು ರೈಲ್ವೇ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ. ವಕೀಲರಾದ ಬಿ.ಆರ್ ದೀಪಕ್ ಅವರ ಮೂಲಕ ಸಲ್ಲಿಸಲ್ಪಟ್ಟ ಅರ್ಜಿಯ ಕುರಿತಾಗಿ ನ್ಯಾಯಾಲಯವು ರೈಲ್ವೇ ಇಲಾಖೆಗೆ ನೀಡಿರುವ ನಿರ್ದೇಶನದ ಕುರಿತು ಸಿ.ಪಿ. ಮುತ್ತಣ್ಣ ಅವರು ‘ಶಕ್ತಿ’ಗೆ ನೀಡಿದ ಮಾಹಿತಿ ಹೀಗಿದೆ: ‘ಉದ್ದೇಶಿತ ರೈಲ್ವೇ ಮಾರ್ಗವು ಪರಿಸರ ಸೂಕ್ಷ್ಮ ಪ್ರದೇಶ, ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿ ಪ್ರದೇಶಗಳ ಪರಿವ್ಯಾಪ್ತಿಯ ಕುರಿತಾಗಿ ಆಯಾ ಇಲಾಖೆಗಳಿಂದ ದೃಢೀಕರಣ ಪತ್ರವನ್ನು ಪಡೆಯಬೇಕು. ಯೋಜನೆಯನ್ನು ಕೈಗೊಳ್ಳುವ ಮುನ್ನ ಈ ಎಲ್ಲ ಇಲಾಖೆಗಳಿಂದ ಅನುಮತಿ ಹೊಂದಬೇಕು. ಈ ಬೆಳವಣಿಗೆಗಳ ಕುರಿತಾಗಿ ಅರ್ಜಿದಾರರಾದ ತನಗೆ ರೈಲ್ವೇ ಇಲಾಖೆ ಮಾಹಿತಿ ನೀಡಬೇಕು’ ಎಂದು ನ್ಯಾಯಾಲಯವು ನಿರ್ದೇಶಿಸಿರುವದಾಗಿ ಮುತ್ತಣ್ಣ ತಿಳಿಸಿದ್ದಾರೆ.ಇಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಈ ಕುರಿತಾಗಿ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ ಅವರು ಆದೇಶ ಹೊರಡಿಸಿದ್ದಾರೆ.