ಮಡಿಕೇರಿ, ಅ. 22: ಕಳೆದ ವರ್ಷ ಸಂಭವಿಸಿದ ವಿಪರೀತ ಮಳೆಯ ನಡುವೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಿದ್ದ ಗುಡ್ಡ ಕುಸಿದು, ಆ ಕಟ್ಟಡ ಸಹಿತ ಸಾರ್ವಜನಿಕ ಶೌಚಾಲಯಗಳನ್ನು ತೆರವುಗೊಳಿಸ ಲಾಗಿದೆ. ಬಸ್ ನಿಲ್ದಾಣವನ್ನು ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಈ ನಡುವೆ ನಗರದ ನಾಲ್ಕು ದಿಕ್ಕಿನಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಲ್ಲದೆ, ದೂರದ ಊರುಗಳಿಂದ ಆಗಮಿಸುವ ಮಹಿಳೆಯರು, ಮಕ್ಕಳು, ಶಾಲಾ - ಕಾಲೇಜು ವಿದ್ಯಾರ್ಥಿಗಳು ಇದೀಗ ನಿತ್ಯ ಬವಣೆ ಪಡುವಂತಾಗಿದೆ.
ಬೇರೆ ಬೇರೆ ಊರುಗಳಿಗೆ ತೆರಳುವ ಬಸ್ಗಾಗಿ ಈ ಹಳೆಯ ನಿಲ್ದಾಣದಲ್ಲಿ ಅನಿವಾರ್ಯವಾಗಿ ಕಾಯುತ್ತಾರೆ; ಇಂತಹ ವೇಳೆ ಶೌಚಾಲಯವಿಲ್ಲದೆ ಪರದಾಡುತ್ತಿದ್ದಾರೆ. ಉದ್ಯಮಿ ಮುಳಿಯ ಕೇಶವಪ್ರಸಾದ್, ತಾತ್ಕಾಲಿಕ ವ್ಯವಸ್ಥೆಯಲ್ಲಿ ಬಸ್ ತಂಗುದಾಣ ಹಾಗೂ ಶೌಚಾಲಯ ನಿರ್ಮಿಸಲು ಮುಂದೆ ಬಂದಿದ್ದರೂ, ನಗರಸಭೆ ಆಸಕ್ತಿ ತೋರುತ್ತಿಲ್ಲ; ಹೀಗಾಗಿ ನಿತ್ಯ ಪ್ರಯಾಣಿಕರು ಮತ್ತು ಖಾಸಗಿ ಬಸ್ ಸಿಬ್ಬಂದಿ ಹಿಡಿಶಾಪ ಹಾಕತೊಡಗಿದ್ದಾರೆ.
ಪ್ರಸಕ್ತ ಪರಿಸ್ಥಿತಿಯ ನಡುವೆ ಮಳೆ - ಬಿಸಿಲು - ಚಳಿಯಂತಹ ವಿಚಿತ್ರ ಹವಾಮಾನದಿಂದಾಗಿ ಕಂಗೆಟ್ಟಿರುವ ಮಂದಿ; ನಗರಸಭೆ ತುರ್ತಾಗಿ ಕಾಳಜಿ ವಹಿಸಿ ಪರ್ಯಾಯ ವ್ಯವಸ್ಥೆ ರೂಪಿಸುವಂತೆ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಭರತ್ ಹಾಗೂ ಕಾರ್ಯದರ್ಶಿ ಸಲಾಂ ಸೇರಿದಂತೆ ಅನೇಕ ಪ್ರಯಾಣಿಕರು ‘ಶಕ್ತಿ’ಗೆ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.