ವೀರಾಜಪೇಟೆ, ಅ. 22: ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರಕಾರ ಆಡಳಿತ ಕೋಮಾವಸ್ಥೆಯಲ್ಲೇ ಮುಂದುವರೆದಿದೆ ಎಂದು ಕೆ.ಪಿ.ಸಿ.ಸಿ.ಯ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಟಿ.ಎಂ. ಶಾಹಿದ್ ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟಿ.ಎಂ. ಶಾಹಿದ್ ಅವರು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಆಯ್ಕೆ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಹಾಗೂ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವ ಉದ್ದೇಶದಿಂದ ವೀರಾಜಪೇಟೆಗೆ ಭೇಟಿ ನೀಡಿದ್ದು ಕಾರ್ಯಕರ್ತರೊಂದಿಗೆ ಸಮಾ ಲೋಚನೆ ನಡೆಸಿದ್ದೇನೆ. ಮಧ್ಯಂತರ ಚುನಾವಣೆಗೂ ಮುನ್ನ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕಾಗಿದೆ. ಆದಾಯ ತೆರಿಗೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ಇದು ಬಿಜೆಪಿ ಸರಕಾರದ ರಾಜಕೀಯ ದ್ವೇಷ ಸಾಧನೆಯಾಗಿದೆ ಎಂದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸದಸ್ಯ ಅರುಣ್ ಮಾಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ನಾಪೋಕ್ಲುವಿನ ರಮಾನಾಥ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಹ್ಯಾರೀಶ್, ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿ ಅಧ್ಯಕ್ಷ ಸ.ರ. ಚಂಗಪ್ಪ ಹಾಜರಿದ್ದರು.