ಮಡಿಕೇರಿ, ಅ. 22: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇಬ್ನಿವಳವಾಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಮೈಸೂರು ವಿಭಾಗಮಟ್ಟದ ಬಾಲಕ - ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಹಾಗೂ ಹಾಸನ ತಂಡಗಳು ಚಾಂಪಿಯನ್‍ಗಳಾಗಿ ಹೊರಹೊಮ್ಮಿವೆ. ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿಯ 17 ವರ್ಷದೊಳಗಿನ ಹಾಗೂ 14 ವರ್ಷ ದೊಳಗಿನ ಬಾಲಕರ ವಿಭಾಗದಲ್ಲಿ ಕೊಡಗು ತಂಡ ಜಯಗಳಿಸಿದರೆ, ಬಾಲಕಿಯರ ವಿಭಾಗದಲ್ಲಿ ಹಾಸನ ತಂಡ ಜಯಗಳಿಸಿದೆ.

ಇಂದು ನಡೆದ 17 ವರ್ಷ ದೊಳಗಿನ ಬಾಲಕರ ಪಂದ್ಯಾಟ ರೋಚ ಕತೆಯಿಂದ ಕೂಡಿತ್ತು. (ಮೊದಲ ಪುಟದಿಂದ) ಬಲಿಷ್ಠ ಕೊಡಗು ಹಾಗೂ ಮೈಸೂರು ತಂಡಗಳು ಆರಂಭದಿಂದಲೇ ಪೈಪೋಟಿಗಿಳಿದವು. ಎರಡನೇ ನಿಮಿಷದಲ್ಲಿ ಕೊಡಗು ತಂಡ ಗೋಲು ಬಾರಿಸಿದರೆ, 3ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಹೆಚ್.ಎ. ವಚನ್ ಗೋಲಾಗಿ ಪರಿವರ್ತಿಸಿದನು. ನಂತರದಲ್ಲಿ ಬಿರುಸಿನ ಆಟಕ್ಕಿಳಿದ ಮೈಸೂರು ತಂಡದ ಆಟಗಾರರು ಚೆಂಡನ್ನು ಕೊಡಗು ತಂಡದ ಆವರಣಕ್ಕೆ ಕೊಂಡೊಯ್ದರು. 16ನೇ ನಿಮಿಷದಲ್ಲಿ ಮೈಸೂರಿನ ಪ್ರತಿಕ್ ಮಾದಯ್ಯ ರಿವರ್ಸ್ ಸ್ಟ್ರೋಕ್ ಮೂಲಕ ಉತ್ತಮವಾದ ಗೋಲು ದಾಖಲಿಸಿದ. ನಂತರದಲ್ಲಿ ಹಿಡಿತ ಕಾಯ್ದುಕೊಂಡ ಕೊಡಗು ತಂಡದ ಆಟಗಾರರು ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟು ಕೊಂಡರು. 20, 23 ಹಾಗೂ 28ನೇ ನಿಮಿಷದಲ್ಲಿ ಬಿಪಿನ್ ಮತ್ತೆ ಮೂರು ಗೋಲು ದಾಖಲಿಸಿದರೆ, 30ನೇ ನಿಮಿಷದಲ್ಲಿ ಶಶಾಂಕ್, 31ನೇ ನಿಮಿಷದಲ್ಲಿ ಆರ್ಯನ್ ಗೋಲು ದಾಖಲಿಸಿ ತಂಡವನ್ನು 7-1 ಅಂತರದಿಂದ ಗೆಲ್ಲಿಸುವಲ್ಲಿ ಸಫಲರಾದರು.

ಹದಿನಾಲ್ಕು ವರ್ಷದೊಳಗಿನ ಬಾಲಕರ ಪಂದ್ಯಾಟದಲ್ಲಿ ಕೊಡಗು ತಂಡ ಹಾಸನ ತಂಡವನ್ನು 4-1 ಗೋಲಿನಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಉತ್ತಮ ಪ್ರದರ್ಶನ ತೋರಿದ ಕೊಡಗು ತಂಡದ ಆಟಗಾರ ಅಖಿಲ್ ಅಯ್ಯಪ್ಪ 4ನೇ ನಿಮಿಷದಲ್ಲಿ ಗೋಲು ದಾಖಲಿಸಿದ. ರಭಸದ ಆಟಕ್ಕಿಳಿದ ಹಾಸನದ ಆಟಗಾರರು, 9ನೇ ನಿಮಿಷದಲ್ಲಿ ಹರ್ಷಿತ್‍ನ ಗೋಲಿನೊಂದಿಗೆ ಸಮಬಲ ಕಾಯ್ದುಕೊಂಡರು.

ನಂತರದಲ್ಲಿ 28 ಹಾಗೂ 29ನೇ ನಿಮಿಷದಲ್ಲಿ ಆಕರ್ಶ್ ಬಿದ್ದಪ್ಪ ಎರಡು ಗೋಲು ದಾಖಲಿಸಿ ಮುನ್ನಡೆ ಕಾಯ್ದುಕೊಂಡರೆ, 37ನೇ ನಿಮಿಷದಲ್ಲಿ ಸಂಪನ್ನ್ ಗಣಪತಿ ಗೋಲು ಬಾರಿಸಿ 4-1 ಗೋಲಿನ ಅಂತರದಿಂದ ಗೆಲವು ಸಾಧಿಸುವಲ್ಲಿ ರೂವಾರಿಯಾದರು.

ಬಾಲಕಿಯರ ವಿಭಾಗ

ಹದಿನೇಳು ವರ್ಷದೊಳಗಿನ ಬಾಲಕಿಯರ ಪಂದ್ಯಾಟ ಕೊಡಗು ಹಾಗೂ ಹಾಸನ ತಂಡಗಳ ನಡುವೆ ನಡೆಯಿತು. ಎರಡೂ ಬಲಶಾಲಿ ತಂಡಗಳ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. 10ನೇ ನಿಮಿಷದಲ್ಲಿ ಹಾಸನದ ಶಕ್ತಿ ಗೋಲು ಬಾರಿಸಿದಳು. ಕೊನೆಯವರೆಗೂ ಹೋರಾಟ ನಡೆಸಿದ ಕೊಡಗು ತಂಡದ ಪರ 46ನೇ ನಿಮಿಷದಲ್ಲಿ ಸೀಮಾ ಗೋಲು ದಾಖಲಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದಿತ್ತಳು.

ನಂತರ ಶೂಟೌಟ್ ಅವಕಾಶ ನೀಡಲಾಗಿ, ಇದರಲ್ಲಿ ಹಾಸನ ತಂಡದ ಸ್ನೇಹ ಹಾಗೂ ಮಾನಸ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಕೊಡಗು ತಂಡದ ದೇಚಮ್ಮ ಒಂದು ಗೋಲು ದಾಖಲಿಸಿದರೆ, ಇನ್ನುಳಿದವರು ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಹಾಸನ ತಂಡ 3-2 ಗೋಲುಗಳ ಅಂತರದಿಂದ ಜಯಗಳಿಸಿ ಪ್ರಶಸ್ತಿ ಪಡೆದುಕೊಂಡಿತು.

ಹದಿನಾಲ್ಕು ವರ್ಷದೊಳಗಿನ ಬಾಲಕಿಯರ ಪಂದ್ಯಾವಳಿ ಕೊಡಗು - ಹಾಸನ ತಂಡಗಳ ನಡುವೆ ನಡೆಯಿತು. ಬಲಿಷ್ಠವಾಗಿದ್ದ ಹಾಸನದ ತಂಡದ ಸಿಂಚನರಾಜ್ ಆರಂಭದ 1 ನಿಮಿಷ ಅವಧಿಯಲ್ಲಿ ಗೋಲು ದಾಖಲಿಸಿದಳು. ನಂತರದಲ್ಲಿ ಸೌಮ್ಯ ಹ್ಯಾಟ್ರಿಕ್ ಗೋಲಿನೊಂದಿಗೆ ನಿರಂತರ 9, 19, 21, 26 ನಿಮಿಷದಲ್ಲಿ 4 ಗೋಲು ಬಾರಿಸಿದಳು.

ಹಾಸನ ತಂಡ 5-0 ಅಂತರದಿಂದ ಜಯಗಳಿಸಿತು. ಮಳೆ ಕೊಂಚ ಅಡ್ಡಿಪಡಿಸಿತ್ತಾದರೂ ಆಟಗಾರರು ಹುಮ್ಮಸ್ಸಿನಿಂದ ಆಡಿದರೆ ಎಲ್ಲಾ ತಂಡಗಳ ತರಬೇತುದಾರರು, ಪೋಷಕರು ಉತ್ಸಾಹದಿಂದ ಪ್ರೋತ್ಸಾಹ ನೀಡುತ್ತಿದ್ದುದು ಕಂಡು ಬಂದಿತು. ಆದರೆ 14 ವರ್ಷದೊಳಗಿನ ಬಾಲಕಿಯರ ತಂಡದ ತರಬೇತುದಾರರು ಕಾಣಿಸಿಕೊಳ್ಳದ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

ಶುಭ ಹಾರೈಕೆ

ಅಂತಿಮ ಪಂದ್ಯಾವಳಿ ವೇಳೆ ಆಗಮಿಸಿದ್ದ ವಿಧಾನ ಪರಿಷತ್ತು ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಸಚಿವ ಯಂ.ಸಿ. ನಾಣಯ್ಯ ಇನ್ನಿತರರು ಆಟಗಾರರನ್ನು ಪರಿಚಯಿಸಿಕೊಂಡು ಶುಭ ಹಾರೈಕೆಯೊಂದಿಗೆ ಪಂದ್ಯಾವಳಿಗೆ ಚಾಲನೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ, ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ರವಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪುಗ್ಗೇರ ಪ್ರವೀಣ್, ದೈಹಿಕ ಶಿಕ್ಷಕರ ತಾಲೂಕು ಪರಿವೀಕ್ಷಕ ಪೊನ್ನಚನ ಶ್ರೀನಿವಾಸ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರೇಶ್, ಬೋಯಿಕೇರಿ ಶಾಲಾ ಮುಖ್ಯ ಶಿಕ್ಷಕ ರಾಜು, ನಿವೃತ್ತ ದೈಹಿಕ ಶಿಕ್ಷಕ ಪಿ.ಎಸ್. ಮಾಚಯ್ಯ, ನಾಗಯ್ಯ ಶೆಟ್ಟಿ, ಮಡಿಕೇರಿ ಸ.ಮಾ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಶಿವರಾಂ, ಕೆ.ಎಸ್. ಹರೀಶ್, ದಾನಿಗಳಾದ ಕೆದಂಬಾಡಿ ಶಿವಪ್ರಸಾದ್, ಪುಗ್ಗೇರ ಪೊನ್ನಪ್ಪ, ಕೊಂಪುಳಿ ಅಶೋಕ್, ಪರಿಚನ ಕಿರಣ್, ನಾಗರಾಜ್, ಗಣೇಶ್, ಪೂವಣ್ಣ, ಮಣವಟ್ಟಿರ ಅಯ್ಯಪ್ಪ, ಬೋಯಿಕೇರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್ ಇನ್ನಿತರರು ಬಹುಮಾನ ವಿತರಣೆ ಮಾಡಿದರು. ದೈಹಿಕ ಶಿಕ್ಷಕ ವರದರಾಜು ನಿರೂಪಿಸಿ, ಸ್ವಾಗತಿಸಿದರು.