ವೀರಾಜಪೇಟೆ, ಅ. 22: ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಸರಕಾರವೇ ಎಲ್ಲವನ್ನು ಮಾಡಬೇಕು ಎಂದು ನಿರೀಕ್ಷಿಸಬಾರದು. ನಾವು ದೇಶದ ಹಿತ ಚಿಂತನೆಯೊಂದಿಗೆ ಕೆಲಸ ಕಾರ್ಯಗಳನ್ನು ಸ್ವಯಂ ಪ್ರೇರಿತರಾಗಿ ಮಾಡಬೇಕು ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಆದಿತ್ಯ ಸಲಹೆಯಿತ್ತರು.

ವೀರಾಜಪೇಟೆ ರೋಟರಿ ಸಂಸ್ಥೆ, ಪಟ್ಟಣ ಪಂಚಾಯಿತಿ ಹಾಗೂ ಕ್ಲಬ್ ಮಹೀಂದ್ರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಚ್ಛತಾ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಯೊಂದು ವಿಚಾರದಲ್ಲಿ ತಾವಾಗಿಯೇ ಜಾಗೃತರಾಗಬೇಕು. ಇಂದು ಶುದ್ಧ ಗಾಳಿ, ನೀರು ಹಾಗೂ ಉತ್ತಮ ಪರಿಸರಕ್ಕೆ ಸ್ವಚ್ಛತೆ ಅತೀ ಮುಖ್ಯವಾಗಿದೆ. ಆದ್ದರಿಂದ ಜನರನ್ನು ಜಾಗೃತಗೊಳಿಸುವ ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಸ್ವಚ್ಛತೆಯಲ್ಲಿ ಎಲ್ಲರೂ ಕೈ ಜೋಡಿಸ ಬೇಕು. ಕಸವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಆದ್ದರಿಂದ ಸಾರ್ವಜನಿಕರು ಹಾಗೂ ವರ್ತಕರು ಸಹಕಾರ ನೀಡಬೇಕು ಎಂದರು.

ಈ ಸಂದರ್ಭ ಕ್ಲಬ್ ಮಹೀಂದ್ರ ಸಂಸ್ಥೆಯ ಆಡಳಿತ ವಿಭಾಗದ ಅಯ್ಯಪ್ಪ, ಹಿರಿಯ ರೋಟೆರಿಯನ್ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಪೃಥ್ವಿ ಮಾದಯ್ಯ, ಚಿತ್ರಬಾನು, ಸುನಿಲ್ ನಾಣಯ್ಯ, ಡಾ. ಲವಿನ್ ಚಂಗಪ್ಪ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸುನಿತಾ, ರಾಜೇಶ್ ಮಹಮ್ಮದ್ ರಾಫಿ, ಸಿ.ಕೆ. ಪೃಥ್ವಿನಾಥ್ ಹಾಜರಿದ್ದರು. ರೋಟರಿ ಶಾಲಾ ಮಕ್ಕಳು ಸ್ವಚ್ಛತೆಯ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿದರು.