*ಸಿದ್ಧಾಪುರ, ಅ. 22: ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ರಚನೆಯಾದ ಕಾವೇರಿ ತಾಲೂಕಿಗೆ ಎಲ್ಲಾ ರೀತಿಯಲ್ಲೂ ಭೌಗೋಳಿಕವಾಗಿ ಸಶಕ್ತವಾದ ನಂಜರಾಯಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿಸಬೇಕೆಂದು ಒತ್ತಾಯಿಸಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.

ನಂಜರಾಯಪಟ್ಟಣ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಚ್ಚಂಡಿರ ಆಸುಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ಚೆಟ್ಟಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಸ್ಥರ ಸಭೆ ನಡೆದು, ಕಂದಾಯ ಹೋಬಳಿ ಕೇಂದ್ರಕ್ಕೆ ಬೇಕಾದ ಕಚೇರಿ ನಿರ್ಮಿಸಲು ಸಾಕಷ್ಟು ಸವಲತ್ತುಗಳಿವೆ. ಐತಿಹಾಸಿಕ ಸ್ಥಳವಾದ ನಂಜರಾಯಪಟ್ಟಣ ಇತಿಹಾಸ ಪ್ರಸಿದ್ಧ ನಂಜುಡೇಶ್ವರ ದೇವಾಲಯ ಪ್ರಸಿದ್ಧ ಪ್ರವಾಸಿತಾಣ ದುಬಾರೆಯನ್ನು ಒಳಗೊಂಡಿದ್ದು ಎಲ್ಲಾ ಮೂಲಭೂತ ಸೌಕರ್ಯವೂ ಲಭ್ಯವಿರುವದರಿಂದ ನೆಲ್ಲಿಹುದಿಕೇರಿಯನ್ನು ಹೋಬಳಿ ಕೇಂದ್ರವನ್ನಾಗಿಸುವ ಬದಲು ನಂಜರಾಯಪಟ್ಟಣವನ್ನು ಹೋಬಳಿ ಕೇಂದ್ರವಾಗಿಸುವದು ಸೂಕ್ತವೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.

ಗುಡ್ಡೆಹೊಸೂರು ಜಿ.ಪಂ.ಕ್ಷೇತ್ರದ ಸದಸ್ಯ ಪಿ.ಎಂ. ಲತೀಫ್, ವಾಲ್ನೂರು ತ್ಯಾಗತ್ತೂರು ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ ನಂಜರಾಯಪಟ್ಟಣವನ್ನು ಕಾವೇರಿ ತಾಲೂಕಿನ ಹೋಬಳಿ ಕೇಂದ್ರವನ್ನಾಗಿಸುವದು ಈ ವಿಭಾಗದ ಜನರ ಹಿತದೃಷ್ಟಿಯಿಂದ ಸಮಂಜಸವಾದುದೆಂದು ಪ್ರತಿಪಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ. ಸದಸ್ಯ ವಿಜುಚಂಗಪ್ಪ, ಕಾವೇರಿ ತಾಲೂಕಿಗೆ ಹೋಬಳಿ ಕೇಂದ್ರ ರಚಿಸಲು 3 ಗ್ರಾ.ಪಂ.ಗಳನ್ನು ಒಳಪಡಿಸಲಾಗಿದೆ ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ನೆಲಿಹುದಿಕೇರಿ ಒಳಗೊಂಡ ನಂಜರಾಯಪಟ್ಟಣ ಹೋಬಳಿ ರಚನೆಯಾಗಬೇಕೆಂದು ಹೇಳಿದರು.

ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಉಪಾಧ್ಯಕ್ಷ ಸತೀಶ, ಅಂಚೆಮನೆ ಸುಧಿ ಅವರು ಸಹ ನಂಜರಾಯಪಟ್ಟಣ ಹೋಬಳಿ ಕೇಂದ್ರ ಜನಹಿತ ದೃಷ್ಟಿಯಿಂದ ಅಗತ್ಯವಾಗಿ ರಚನೆಯಾಗಬೇಕೆಂದು ಹೇಳಿದರು.

ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಚೆಟ್ಟಳ್ಳಿ ಚೇರಳ ಶ್ರೀಮಂಗಲ ಸುಂಟಿಕೊಪ್ಪ ಹೋಬಳಿಗೆ ಕುಡ್ಲೂರು ಚೆಟ್ಟಳ್ಳಿ ನಂಜರಾಯಪಟ್ಟಣ ಹೋಬಳಿಗೆ, ಚೆಟ್ಟಳ್ಳಿಯನ್ನು ಮಡಿಕೇರಿ ತಾಲೂಕಿಗೆ ಈರಳೆವಳಮುಡಿ ಮಡಿಕೇರಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

ಮಾಜಿ ಜಿ.ಪಂ. ಸದಸ್ಯೆ ಎ.ವಿ. ಶಾಂತಕುಮಾರ್ ಮಾಜಿ ಜಿ.ಪಂ. ಸದಸ್ಯ ಗಿರಿಜನ ಮುಖಂಡ ಆರ್.ಕೆ. ಚಂದ್ರ ಉದ್ಯಮಿ ರತೀಶ್ ಕುಮಾರ್, ನಂಜರಾಯಪಟ್ಟಣ ಗ್ರಾ.ಪಂ. ಸದಸ್ಯ ಅಯ್ಯಂಡ ಲೋಕೇಶ್, ನಂಜರಾಯಪಟ್ಟಣ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ, ಮಾಜಿ ಅಧ್ಯಕ್ಷ ಮನು ಮಹೇಶ, ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಸದಸ್ಯೆ ಮೇರಿ ಅಂಬುದಾಸ್,ಕಮಲಮ್ಮ, ಕವಿತ, ಸಲೀಂ, ಜಮೀಲ, ನಂಜರಾಯಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುನೈಬಾ, ನಂಜರಾಯಪಟ್ಟಣ ವಿಎಸ್‍ಎಸ್‍ಎನ್ ಮಾಜಿ ಉಪಾಧ್ಯಕ್ಷ ಪರ್ಲಕೋಟಿ ಆಶೋಕ, ಪಂಚಾಯಿತಿ ಮಾಜಿ ಸದಸ್ಯ ಪ್ರೇಮಾನಂದ ಉಪಸ್ಥಿತರಿದ್ದರು.

ಈ ಸಭೆಯನ್ನು ನಿಯೋಜಿಸಿದ ಕೋಟುಮಾಡ ನವೀನ್ ಆಯೋಜಿಸಿದ್ದರು. ಟಿ.ಕೆ. ಸುಮೇಶ್ ಸ್ವಾಗತಿಸಿ ವಂದಿಸಿದರು.

-ಅಂಚೆಮನೆಸುಧಿ