ಮಡಿಕೇರಿ, ಅ. 22: ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವಾದರ್ಶ ದೊಂದಿಗೆ ಮುನ್ನಡೆಯುವದರ ಜತೆಗೆ ಇಂದು ಸಮಾಜದ ಉನ್ನತಿಗೆ ಶಿಕ್ಷಣ ಅತ್ಯವಶ್ಯಕವಾಗಿದ್ದು, ಮಕ್ಕಳ ವಿದ್ಯಾಭ್ಯಾಸದ ಭದ್ರ ಅಡಿಪಾಯಕ್ಕೆ ಸಂಘಟನೆ ನೆರವಾಗಬೇಕು ಎಂದು ಮಂಗಳೂರಿನ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಹೇಳಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಡಿಕೇರಿಯ ಬಿಲ್ಲವ ಸಮಾಜ ಸೇವಾ ಸಂಘದ ಸಮ್ಮೇಳನ, ಹಾಗೂ ನಾರಾಯಣ ಗುರು ಜಯಂತೋತ್ಸವ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

150 ವರ್ಷಗಳ ಹಿಂದೆ ಜಾತಿ ಪದ್ಧತಿಯಿಂದಾಗಿ ಬಿಲ್ಲವ ಸಮಾಜದ ಜನರು ಶೋಷಣೆಗೆ ಒಳಗಾಗಿದ್ದರು. ನಾರಾಯಣ ಗುರುಗಳ ದಿವ್ಯ ಸಂದೇಶದಿಂದಾಗಿ ಸಮಾಜದಲ್ಲಿ ಬದಲಾವಣೆಯಾಗಿತ್ತು. ‘ಶಿಕ್ಷಣದಲ್ಲಿ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ’ ಎನ್ನುವ ಅವರ ಸಂದೇಶವನ್ನು ಎಲ್ಲರು ಪಾಲಿಸಬೇಕು ಎಂದು ಸಲಹೆ ನೀಡಿದರು.

ಮಂಗಳೂರಿನ ಬಿಲ್ಲವರ ಮಹಿಳಾ ಯೂನಿಯನ್ ಅಧ್ಯಕ್ಷೆ ಎನ್. ಸುಮಲತಾ ಸುವರ್ಣ ‘ಸಮಾಜ ಸೇವಾ ಸಂಘಗಳನ್ನು ಕಟ್ಟುವದು ಮಾತ್ರವಲ್ಲದೆ, ಸಮುದಾಯ ಬಾಂಧವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ವಾವಲಂಬನೆ ಸಾಧಿಸುವ ಹೊಣೆಗಾರಿಕೆಯನ್ನು ಸಂಘಟನೆಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಡಿಕೇರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷೆ ಬಿ.ಎಸ್.ಲೀಲಾವತಿ ಮಾತನಾಡಿ, ಜಿಲ್ಲೆಯಲ್ಲಿ ಬಿಲ್ಲವ ಸಮಾಜ ಬಾಂಧವರಲ್ಲಿ ಸಾಕಷ್ಟು ಮಂದಿ ಆರ್ಥಿಕವಾಗಿ ಸಬಲತೆಯನ್ನು ಕಾಣದವರಿದ್ದಾರೆ ಎಂದು ವಿಷಾದಿಸಿದರು.

ನಂತರ ಮಡಿಕೇರಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಅಖಿಲ ಭಾರತ ಬಿಲ್ಲವರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಲಾಯಿತು. ವಿದ್ಯಾರ್ಥಿವೇತನ ನೀಡಲಾಯಿತು.

ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಕುಶಾಲನಗರ ಸುವರ್ಣ ಕಾಫಿ ವಕ್ರ್ಸ್‍ನ ಉದ್ಯಮಿ ಬಿ.ಎನ್. ರಮೇಶ್, ತಾ.ಪಂ. ಸದಸ್ಯ ಅಪ್ರು ರವೀಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಪದ್ಮ ಉಪಸ್ಥಿತರಿದ್ದರು.