ಮಡಿಕೇರಿ, ಅ.21 : ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುವದರೊಂದಿಗೆ ಸುಮಾರು 22 ವರ್ಷಗಳ ಕಾಲ ಜೈಲುವಾಸ ಮತ್ತು ಚಿತ್ರಹಿಂಸೆ ಅನುಭವಿಸಿದ ವೀರ ಸಾವರ್ಕರ್ ಅವರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರ ಸಮೂಹಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ. ಮನುಮುತ್ತಪ್ಪ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವದಕ್ಕಾಗಿ ತಮ್ಮ ನಾಲಗೆಯನ್ನು ಹೇಗೆಂದರೆ ಹಾಗೆ ಹರಿಯಬಿಡುವ ಸಿದ್ದರಾಮಯ್ಯ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟ ಗಾರನೆಂದು ವೈಭವೀಕರಿಸಿ ಹಲವು ಮಂದಿ ದೇಶಭಕ್ತರ ಸಾವಿಗೆ ಪ್ರಚೋದನೆ ನೀಡಿದ್ದಲ್ಲದೆ, ಜಾತಿ-ಜಾತಿಗಳ ನಡುವೆ, ಸಮಾಜ-ಸಮಾಜಗಳ ನಡುವೆ ಕಂದಕವನ್ನು ಸೃಷ್ಟಿಸಿದರು ಎಂದು ಮನುಮುತ್ತಪ್ಪ ಟೀಕಿಸಿದರು.

ವೀರ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲದಿದ್ದಲ್ಲಿ ಅವರೊಮ್ಮೆ ಅಂಡಮಾನ್‍ಗೆ ಭೇಟಿ ನೀಡಿ ಅಲ್ಲಿನ ಸೆಲ್ಯುಲರ್ ಜೈಲನ್ನು ಸಂದರ್ಶಿಸಿ ಬರಲಿ. ಅಲ್ಲಿ ಸಾವರ್ಕರ್ ಅವರ ಜೈಲುವಾಸದ ಎಲ್ಲಾ ಘಟನಾವಳಿ ಗಳನ್ನು ಅಧ್ಯಯನ ಮಾಡ ಬಹುದಾಗಿದೆ ಎಂದು ಹೇಳಿದರು.

ಓರ್ವ ನೈಜ ಸ್ವಾತಂತ್ರ್ಯ ಹೋರಾಟಗಾರನಿಗೆ ಭಾರತ ರತ್ನ ನೀಡುವದಕ್ಕೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ಸಿಗರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮನು ಮುತ್ತಪ್ಪ ಅವರು, ಭಾರತ ರತ್ನ ನೀಡುವ ವಿಚಾರದಲ್ಲಿ ಬಿಜೆಪಿ ಎಂದೂ ರಾಜಕೀಯ ಮಾಡಿಲ್ಲ. ದೇಶಕ್ಕಾಗಿ ತ್ಯಾಗ ಮಾಡದ ವ್ಯಕ್ತಿಗಳಿಗೆ ಭಾರತ ರತ್ನ ನೀಡುವಂತೆ ಶಿಫಾರಸ್ಸನ್ನೂ ಮಾಡುವದಿಲ್ಲ ಎಂದು ನುಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಜೈಲುವಾಸ, ಬ್ರಿಟೀಷರಿಂದ ಚಿತ್ರಹಿಂಸೆ ಅನುಭವಿಸಿದ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವದು ಅತ್ಯಂತ ಸೂಕ್ತವಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಡಿ ಇಡಬೇಕೆಂದು ರಾಜ್ಯ ಬಿಜೆಪಿ ಒತ್ತಾಯಿಸಲಿರುವದಾಗಿ ಮನುಮುತ್ತಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎನ್.ಎ. ರವಿಬಸಪ್ಪ, ಮಡಿಕೇರಿ ತಾಲೂಕು ಕಾರ್ಯದರ್ಶಿ ಕೋಡಿರ ಪ್ರಸನ್ನ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಮನು ರಾಮಚಂದ್ರ, ಮಡಿಕೇರಿ ತಾ.ಪಂ. ಸದಸ್ಯ ಕೊಡಪಾಲು ಗಣಪತಿ ಉಪಸ್ಥಿತರಿದ್ದರು.