ಶನಿವಾರಸಂತೆ, ಅ. 21: ಸಮೀಪದ ಗುಡುಗಳಲೆ ವೃತ್ತದಿಂದ ಕೊಡ್ಲಿಪೇಟೆ ಮಾರ್ಗವಾಗಿ ಹಾಸನಕ್ಕೆ ಹೋಗುವ ಮುಖ್ಯರಸ್ತೆ ನಿತ್ಯ ಸುರಿವ ಮಳೆಯಿಂದ ಜಲ್ಲಿ, ಡಾಂಬರು ಕಿತ್ತುಹೋಗಿ ದೊಡ್ಡ ಹೊಂಡವಾಗಿ ವಾಹನ ಸಂಚಾರ ತ್ರಾಸದಾಯಕ ವಾಗಿದೆ. ಈ ರಸ್ತೆಯು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಜಿ.ಎಂ. ಕಾಂತರಾಜ್, ಡಿ.ಬಿ. ಸೋಮಪ್ಪ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಹದಗೆಟ್ಟ ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಮುಖ್ಯ ರಸ್ತೆಗಳು ಇದೀಗ ಪ್ರತಿದಿನ ಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಸಂಪೂರ್ಣ ಹದಗೆಟ್ಟಿದೆ. ಜಲ್ಲಿ, ಡಾಂಬರು ಕಿತ್ತುಹೋಗಿ ದೊಡ್ಡ ದೊಡ್ಡ ಹೊಂಡಗಳಾಗಿವೆ. ಹೊಂಡಗಳಲ್ಲಿ ನೀರು ನಿಂತಿದ್ದು, ವಾಹನ ಚಾಲಕರು ಆಳವೆಷ್ಟಿದೆ ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗುವಂತಾಗಿದೆ. ಈ ಸ್ಥಳಗಳಲ್ಲಿ ಸಿಗ್ನಲ್ ಇಲ್ಲದೇ ವಾಹನಗಳು ನಿಲುಗಡೆಗೊಳ್ಳುತ್ತಿವೆ. ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ವಾಹನ ಸಿಲುಕಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದ್ದಾರೆ.