ಮಡಿಕೇರಿ, ಅ. 21: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಭವಿಷ್ಯದಲ್ಲಿ ಎಲ್ಲಾ ಕೊಡವ ಭಾಷಿಕರನ್ನು ಒಗ್ಗೂಡಿಸಿ ವಿಶ್ವ ಕೊಡವ ಸಮ್ಮೇಳನ ಆಯೋಜಿಸ ಲಾಗುವದು ಎಂದು ಅಕಾಡೆಮಿ ನೂತನ ಅಧ್ಯಕ್ಷೆ ಅಮ್ಮಾಟಂಡ ಡಾ. ಪಾರ್ವತಿ ಅಪ್ಪಯ್ಯ ಇಂಗಿತ ವ್ಯಕ್ತಪಡಿಸಿದರು. ಇಂದು ಇಲ್ಲಿನ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪ್ರಸಕ್ತ 25ನೇ ವರ್ಷಾಚರಣೆ ಸಂದರ್ಭ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರೊಂದಿಗೆ, ಈ ಹಿಂದಿನ ಸಮಿತಿಗಳು ರೂಪಿಸಿಕೊಂಡು ಬಂದಿರುವ ಚಟುವಟಿಕೆಗಳನ್ನು ಮತ್ತಷ್ಟು ಅರ್ಥಪೂರ್ಣವಾಗಿ ಮುನ್ನೆಡೆಸಿಕೊಂಡು ಬರುವದಾಗಿ ನುಡಿದರು.

ತಮ್ಮ ಶೈಕ್ಷಣಿಕ ಬದುಕಿನ ಅನುಭವಗಳೊಂದಿಗೆ ಕೊಡವ ಸಾಹಿತ್ಯ, ಪರಂಪರೆ, ಸಂಸ್ಕøತಿ, ಆಚಾರ - ವಿಚಾರಗಳನ್ನು ಸಿದ್ಧಗೊಳಿಸುವ ಆಶಯ ವ್ಯಕ್ತಪಡಿಸಿದರು. ಹಳೆಬೇರು - ಹೊಸ ಚಿಗುರು ಕೂಡಿದ ಮರದಂತೆ; ಈಗಿನ ಯುವಪೀಳಿಗೆ ಮತ್ತು ಹಿರಿಯರನ್ನು ಒಗ್ಗೂಡಿಸಿ ಕೊಂಡು ಕೊಡಗಿನ ಹಿರಿಮೆಗೆ ಪೂರಕ ಚಟುವಟಿಕೆ ಆಯೋಜಿಸಲಾಗುವದು ಎಂದು ಪಾರ್ವತಿ ಅಪ್ಪಯ್ಯ ನುಡಿದರು.

ಈ ವೇಳೆ ಸದಸ್ಯರುಗಳಾದ ಡಾ. ಮೇಚಿರ ಸುಭಾಷ್ ನಾಣಯ್ಯ, ಪಡಿಞ್ಞರಂಡ ಪ್ರಭುಕುಮಾರ್, ಬಬ್ಬೀರ ಸರಸ್ವತಿ ಮಾತನಾಡಿ, ನೂತನ ಆಡಳಿತ ಮಂಡಳಿಯ ಚಟುವಟಿಕೆಗಳಿಗೆ ಎಲ್ಲಾ ಸಹಕಾರದೊಂದಿಗೆ, ಕೊಡಗಿನ ಎಲ್ಲಾ ಮೂಲಭಾಷಿಕ ಕೊಡವ ಸಮುದಾಯವನ್ನು ಒಗ್ಗೂಡಿಸಿ ಕೊಂಡು ಕಾರ್ಯಕ್ರಮ ಆಯೋಜಿಸು ವಂತೆ ಆಶಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿ

ಕೆ.ಟಿ. ದರ್ಶನ್,

(ಮೊದಲ ಪುಟದಿಂದ) ವಾರ್ತಾಧಿಕಾರಿ ಚಿನ್ನಸ್ವಾಮಿ ಆಶಯ ನುಡಿಗಳನ್ನು ಆಡಿದರು.

ನೂತನ ಸದಸ್ಯರುಗಳಾದ ಮಾಚಿಮಡ ಜಾನಕಿ ಮಾಚಯ್ಯ, ಶಂಭಯ್ಯ ಉಪಸ್ಥಿತರಿದ್ದು; ಗೌರಮ್ಮ ಮಾದಮ್ಮಯ್ಯ ಹಾಗೂ ರವಿ ಕಾಳಪ್ಪ ಗೈರಾಗಿದ್ದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಖಾಯಂ ರಿಜಿಸ್ಟ್ರಾರ್ ನೇಮಕಾತಿಗೆ ಕೋರಿ, ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ನೇಮಕಾತಿ ಬಳಿಕ ಅಕಾಡೆಮಿ ವಾರ್ಷಿಕ ಚಟುವಟಿಕೆಗಳನ್ನು ರೂಪಿಸುವದಾಗಿ ನೂತನ ಅಧ್ಯಕ್ಷರು ಇದೇ ವೇಳೆ ಪ್ರಕಟಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರುಗಳಾದ ಬೊಳ್ಳಜ್ಜಿರ ಅಯ್ಯಪ್ಪ ಹಾಗೂ ಚಿ.ನಾ. ಸೋಮೇಶ್ ಮತ್ತಿತರರು ಹಾಜರಿದ್ದು, ನೂತನ ಆಡಳಿತ ಮಂಡಳಿಗೆ ಶುಭ ಕೋರಿದರು. ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.