ಸೋಮವಾರಪೇಟೆ,ಅ.20: ದಸರಾ ರಜೆ ನೀಡಲಾಗಿದ್ದ ವೇಳೆ ದೊಡ್ಡಮಳ್ತೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪುಂಡರು ದಾಂಧಲೆ ನಡೆಸಿದ್ದು, ಶಾಲಾ ಆವರಣವನ್ನು ಗಬ್ಬೆಬ್ಬಿಸಿದ್ದಾರೆ.
ಶಾಲೆಯ ಗೋಡೆಗಳಿಗೆ ಕೆಸರು ಮೆತ್ತಿದ್ದು, ಹೂಕುಂಡಗಳನ್ನು ಒಡೆದು ಹಾಕಿರುವದಲ್ಲದೇ, ಬೀಗಕ್ಕೆ ಸಂಪೂರ್ಣ ಕೆಸರು ಮೆತ್ತಿ, ಬೀಡಿ, ಸಿಗರೇಟ್ ಸೇದುವ ಮೂಲಕ ವಿಕೃತಿ ಮೆರೆದಿದ್ದಾರೆ. ಶಾಲಾ ವರಾಂಡದಲ್ಲಿದ್ದ ಬಲ್ಬ್‍ಗಳನ್ನು ಒಡೆದು ಹಾಕಿದ್ದು, ಗಾಂಜಾ ಸೇವನೆ ಮಾಡಿ ಮನಸೋಯಿಚ್ಛೆ ದಾಂಧಲೆ ನಡೆಸಿರುವದು ಕಂಡುಬಂದಿದೆ.
ತಾ. 21ರಂದು ಶಾಲೆಗಳು ಪುನರಾರಂಭಗೊಳ್ಳುವ ಹಿನ್ನೆಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಸೇರಿದಂತೆ ಇತರರು ಇಂದು ಶಾಲೆಗೆ ಭೇಟಿ ನೀಡಿದ ಸಂದರ್ಭ, ವಿಕೃತ ಗಬ್ಬೆದ್ದುಹೋಗಿರುವ ಶಾಲಾ ಆವರಣ ಕಂಡುಬಂದಿದೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸಿಬ್ಬಂದಿಗಳಾದ ಉಮೇಶ್ ಮತ್ತು
ಲಕ್ಷ್ಮೀಕಾಂತ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.